ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೆ ಆಗ್ರಹ

2306 Surapur 01
Published on

ಸುರಪುರ: ಬಾದ್ಯಾಪುರ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಗ್ರಾಪಂ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಂತರ ಸಂಘದ ಮುಖಂಡರು ಮಾತನಾಡಿ, ಹುಟ್ಟಿದ ಊರಿನಲ್ಲಿ ಕೆಲಸ ಕೊಟ್ಟು ದೂರದ ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಸರಿಯಾಗಿ ಜಾರಿಗೊಳಿಸುವಲ್ಲಿ ಗ್ರಾಮ ಪಂಚಾಯತ ಅಧಿಕಾರಿಗಳು ವಿಫಲರಾಗಿದ್ದಾರೆ. ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡಿ ದುರ್ಬಳಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾದ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೆ ತರಬೇಕು. ಇದರ ಜತೆ ಮೂಲಭೂತ ಸೌಲಭ್ಯ ಬಡ ಜನರಿಗೆ ತಲುಪಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ತಾಪಂ ಕಚೇರಿಗೆ ಬೀಗ ಮುದ್ರೆ ಹಾಕಿ ಉಗ್ರವಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಕುರಿತು ತಾಪಂ ಅಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು.

ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವುಲ್ ಸಾಬ್ ನದಾಫ್ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ಭೀಮಣ್ಣ ಟಪ್ಪೆದಾರ, ಪ್ರಕಾಶ ಆಲ್ಹಾಳ, ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಅಧ್ಯಕ್ಷ ಧರ್ಮಣ್ಣ ದೊರಿ, ಪ್ರಧಾನ ಕಾರ್ಯದರ್ಶಿ ರಾಮಯ್ಯ ಆಲ್ಹಾಳ, ಸಹ ಕಾರ್ಯದರ್ಶಿ ಮಲ್ಲನಗೌಡ ಮಾಲಿ ಪಾಟೀಲ್, ಸಂಗನಗೌಡ, ಬಸನಗೌಡ, ಹಣಮಂತ್ರಾಯ, ಮರೆಪ್ಪ, ನಿಂಗಣ್ಣ ಕವಲ್ದಾರ, ತಿಪ್ಪಣ ಬಾಡದ, ಪ್ರಭು ಬಾದ್ಯಾಪುರ, ಮಲ್ಲಪ್ಪ ದೊರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net