ಉದ್ಯೋಗ ಖಾತ್ರಿ ಮಾಹಿತಿ ಕೊರತೆಯಿಂದ ವಲಸೆ, ಶೇ.100 ಸಾಧನೆಗೆ ಸಂಸದ ಬಚ್ಚೇಗೌಡ ಸೂಚನೆ

27CBP7
Published on

ಚಿಕ್ಕಬಳ್ಳಾಪುರ: ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜತೆಗೆ ಸಮರ್ಪಕವಾಗಿ ಸವಲತ್ತುಗಳನ್ನು ಒದಗಿಸಲು ಸಂಸದ ಬಿ.ಎನ್.ಬಚ್ಚೇಗೌಡ ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಸದರು, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಯಾರೂ ರಾಜೀ ಆಗಬಾರದು ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ನಿಗದಿಪಡಿಸಿರುವ ಮಾನವ ದಿನಗೂಲಿ ಕೆಲಸ ಸೃಷ್ಟಿಯ ಗುರಿ ಪೂರ್ಣಗೊಳಿಸುವ ಮೂಲಕ ಶೇ.100 ಸಾಧನೆ ಮಾಡಬೇಕು. ವ್ಯಾಪಕ ಪ್ರಚಾರ ಕೈಗೊಂಡು ಜನರಿಗೆ ಕೆಲಸ ಕೊಡಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಉದ್ಯೋಗ ಖಾತ್ರಿ ಯೋಜನೆಯ ಮಾಹಿತಿ ಕೊರತೆಯಿಂದ ಕೆಲಸಕ್ಕೆ ನಗರ, ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಪ್ರಮುಖವಾಗಿ ಇಂತಹವರನ್ನು ಗುರುತಿಸಬೇಕು. ಅಭಿವೃದ್ಧಿ ಕೆಲಸಗಳಲ್ಲಿ ಸಹಭಾಗಿತ್ವ ಪಡೆಯಬೇಕು ಎಂದರು.

ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ನರೇಗಾ ಪ್ರಗತಿ ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ಪ್ರಮುಖವಾಗಿ ಜಲಮೂಲಗಳ ಪುನಶ್ಚೇತನ, ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣ, ಸರ್ಕಾರಿ ಕೊಳವೆಬಾವಿಗಳಿಗೆ ನೀರು ಮರುಪೂರಣ ವ್ಯವಸ್ಥೆ, ಗ್ರಾಪಂ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುವ ವ್ಯವಸ್ಥೆ ಅಳವಡಿಸಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ವಸತಿ ಯೋಜನೆಯ ಅತೃಪ್ತಿ: ವಸತಿ ಯೋಜನೆಯ ಅನುಷ್ಠಾನದಲ್ಲಿ ನಿರೀಕ್ಷೆಗೆ ಅನುಗುಣವಾಗಿ ಗುರಿ ಸಾಧನೆಯಾಗದಿರುವುದರ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳಡಿ ಅನುಷ್ಠಾನ ಮತ್ತಷ್ಟು ಚುರುಕುಗೊಳ್ಳಬೇಕು. ಸರ್ಕಾರದ ಹಂತದಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಆಯಾ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಸೂರು ಇಲ್ಲದವರಿಗೆ ಮನೆ ನಿರ್ಮಿಸಿಕೊಡಬೇಕು. ಸರ್ಕಾರಿ ಜಮೀನುಗಳಲ್ಲಿ ನಿವೇಶನಗಳನ್ನು ವಿಂಗಡಿಸಬೇಕು. ಒಂದು ವೇಳೆ ಜಾಗ ಇಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಬೇಕು ಎಂದು ಸಂಸದರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್.ಲತಾ, ಈಗಾಗಲೇ ವಸತಿ ಯೋಜನೆಗೆ ಭೂ ಮಂಜೂರು, ಲೇಔಟ್ ನಕ್ಷೆ ತಯಾರು ಮತ್ತು ಅನುಮೋದನೆ, ನಿವೇಶನಗಳ ವಿಂಗಡಣೆ, ಫಲಾನುಭವಿಗಳ ಪಟ್ಟಿ ತಯಾರು, ಹಕ್ಕು ಪತ್ರಗಳ ವಿತರಣೆ ಸೇರಿ ಹಲವು ಪ್ರಗತಿದಾಯಕ ಕೆಲಸಗಳು ನಡೆಯುತ್ತಿವೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net