

ಬಸವಕಲ್ಯಾಣ: ತಾಲೂಕಿನ ಪರತಾಪೂರ ಹಾಗೂ ತಳಬೋಗ ಗ್ರಾಮಕ್ಕೆ ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಅವರು ಭೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಹಾಗೂ ಜೆಜೆಎಂ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಪರತಾಪುರ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಅಳವಡಿಸಿದ ನಲ್ಲಿ ಹಾಗೂ ನೀರಿನ ಟ್ಯಾಂಕ್ ವೀಕ್ಷಣೆ ಮಾಡಿದರು. ಅಂಗನವಾಡಿ ಕೇಂದ್ರದಲ್ಲಿ ಅವಕಾಶ ಇದ್ದರೆ ನೀರಿನ ಟ್ಯಾಂಕ್ ಒಳಗಡೆ ಅಳವಡಿಸಿ, ಇಲ್ಲದಿದ್ದರೆ ಹೊರಗಡೆ ಅಳಡಿಸಬೇಕು ಮತ್ತು ಮಕ್ಕಳಿಗೆ ನೀರು ಕುಡಿಯಲು ಬರುವಂತೆ ನಲ್ಲಿ ಅಳವಡಿಸಲು ಸಂಬಂಧಿತರಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುವ ಆಹಾರ ಪದಾರ್ಥಗಳ ಗೋದಾಮಿಗೆ ಭೇಟಿ ನೀಡಿ ಅವುಗಳ ಗುಣಮಟ್ಟ ಮತ್ತು ಅಲ್ಲಿ ತಯಾರಿಸುವ ಶೇಂಗಾ, ತೊಗರಿ ಬೇಳೆ ಸೇರಿದಂತೆ ವಿವಿಧ ಪ್ಯಾಕೆಟ್ ತೂಕ ತಕ್ಕಡಿಯಲ್ಲಿಟ್ಟು ಪರೀಕ್ಷೆ ಮಾಡಿದರು. ಗುತ್ತಿಗೆದಾರರು ಅಂಗನವಾಡಿಗಳಿಗೆ ಸರಬರಾಜು ಮಾಡುವ ಎಲ್ಲ ಪದಾರ್ಥಗಳನ್ನು ಸರಿಯಾಗಿ ತೂಕ ಮಾಡಿಕೊಂಡು ತೆಗೆದುಕೊಳ್ಳಬೇಕು. ಪದಾರ್ಥಗಳು ಸಂಗ್ರಹ ಮಾಡಿಡುವ ಗೋದಾಮಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಸಿಡಿಪಿಒ ಶಾರದಾ ಕಲಮಲಕರ್ ಅವರಿಗೆ ಸೂಚಿಸಿದರು.
ನಂತರ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಘನ ಮತ್ತು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಕಾಮಗಾರಿ ಶೀಘ್ರ ಮುಗಿಸಿ ಅದಕ್ಕೆ ಬೇಕಾದ ಅನುದಾನವನ್ನು ಕೊಡಲು ಸಿದ್ಧ ಎಂದರು.
ತಳಬೋಗ ಗ್ರಾಮದ ಕೆರೆಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ, ಕೂಲಿ ಕಾರ್ಮಿಕರ ಜತೆ ಕೆಲಕಾಲ ಸಂವಾದ ನಡೆಸುವ ಮೂಲಕ ಅವರ ಸಮಸ್ಯೆ ಆಲಿಸಿದರು. ಪ್ರತಿಯೊಬ್ಬರಿಗೂ ಜಾಬ್ ಕಾಡ್೯ ವಿತರಣೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಸಹಾಯಕ ಕಾರ್ಯದರ್ಶಿ (ನರೇಗಾ) ಮಡೋಳಪ್ಪ ಪಿ.ಎಸ್, ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್, ಎಡಿ ಸಂತೋಷ ಚವ್ಹಾಣ್, ಪಿಆರ್ ಇ ಅಧಿಕಾರಿ ರಾಜಕುಮಾರ ಸಾಹುಕಾರ್, ತಾಪಂ ಸಿಬ್ಬಂದಿ ವಿನೋದರೆಡ್ಡಿ ಇತರರಿದ್ದರು.