ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲ

7 smg 4
Published on

ಶಿವಮೊಗ್ಗ: ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಎನ್​ಎಸ್​ಯುುಐ ಶಿವಮೊಗ್ಗ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ನಗರದ ಮಹಾವೀರ ವೃತ್ತದಲ್ಲಿ ದಿನಪತ್ರಿಕೆ, ಟೀ ಮತ್ತು ಮಾಸ್ಕ್ ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.

ಕೋಟ್​ಗಳನ್ನು ಧರಿಸಿ ಕೈಯಲ್ಲಿ ಓದಿನ ಪ್ರಮಾಣಪತ್ರಗಳನ್ನು ಹಿಡಿದಿದ್ದ ಇಂಜಿನಿಯರಿಂಗ್, ಬಿಕಾಂ, ಡಿಪ್ಲೊಮಾ ಸೇರಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆದಿರುವ ನಿರುದ್ಯೋಗಿಗಳು ಉದ್ಯೋಗ ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ವಿದ್ಯಾವಂತರಿಗೆ ಉದ್ಯೋಗ ನೀಡುವಲ್ಲಿ ಯಾವುದೇ ರೀತಿ ಪರಿಣಾಮಕಾರಿ ನಿರ್ಧಾರ ತೆಗೆದುಕೊಂಡಿಲ್ಲ ಎಂದು ದೂರಿದರು.

ಕೇಂದ್ರದಲ್ಲಿ 2ನೇ ಸಲ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಈ ಬಾರಿಯೂ ಉದ್ಯೋಗ ಸೃಷ್ಟಿಸುತ್ತಿಲ್ಲ. ಈ ವರ್ಷ ಕರೊನಾ ಕಾರಣಕ್ಕೆ ಲಕ್ಷಾಂತರ ಯುವ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ನೂರಾರು ಕಂಪನಿಗಳು ಬಾಗಿಲು ಮುಚ್ಚಿವೆ. ಇದರಿಂದ ದೇಶದ ಯುವ ಉದ್ಯೋಗಿಗಳು ಮತ್ತಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಎನ್​ಎಸ್​ಯುುಐ ರಾಜ್ಯ ಉಪಾಧ್ಯಕ್ಷ ಕೆ.ಚೇತನ್, ಶ್ರೀಜಿತ್, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಧುಸೂದನ್, ಜಿಲ್ಲಾಧ್ಯಕ್ಷ ಎಚ್.ಎಸ್.ಬಾಲಾಜಿ, ಕಾರ್ಯಾಧ್ಯಕ್ಷ ವಿನಯ್, ನಗರಾಧ್ಯಕ್ಷ ವಿಜಯ್, ಗ್ರಾಮಾಂತರ ಅಧ್ಯಕ್ಷ ರವಿ, ವಿನ್ಯಾಸ್, ಮಂಜು ಪುರಲೆ, ಅಬ್ದುಲ್ ಸತ್ತಾರ್, ಗಿರೀಶ್, ಶಿವು, ಭರತ್, ಸಂದೀಪ್, ಪ್ರಮೋದ್, ಆಕಾಶ್, ರವಿ, ಹೇಮಂತ್, ಸಂಜಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net