

ಮೈಸೂರು: ಆಯುರ್ವೇದಕ್ಕೆ ಹೆಚ್ಚು ಪ್ರೋತ್ಸಾಹ ನೀಡುವುದರ ಜತೆಗೆ ಜಾಮುಂಡಿಬೆಟ್ಟ ಹಾಗೂ ನಗರದ ಪ್ರಮುಖ ಪಾರ್ಕ್‌ಗಳಲ್ಲಿ ಆಯುರ್ವೇದ ಸಸಿಗಳನ್ನು ನೆಟ್ಟು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದಿಂದ ಶ್ರೀರಾಂಪುರದ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಇಂದು ಹಣ, ಹೆಸರು ಸಂಪಾದನೆ ಮಾಡುವುದು ಸುಲಭವಾಗಿದೆ. ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟಕರ ಎನ್ನುವುದನ್ನು ಮರೆತ್ತಿದ್ದಾನೆ. ಆದ್ದರಿಂದ ಬೇರೆಯವರನ್ನು ಕಂಡು ಅಸೂಯೆ ಪಡದೆ ಒಳ್ಳೆಯ ಆಲೋಚನೆಗಳನ್ನು ಮಾಡಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಗಿಡ, ಮರಗಳನ್ನು ಬೆಳೆಸುವುದರಿಂದ ಒಳ್ಳೆ ಗಾಳಿ ದೊರೆಯುತ್ತದೆ. ಹಾಗೆಯೇ ಆಯುರ್ವೇದ ಸಸಿಗಳನ್ನು ಬೆಳೆಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ಗ್ರಾಮೀಣ ಜನರಲ್ಲಿ ಆಯುರ್ವೇದದ ಬಗ್ಗೆ ನಂಬಿಕೆ ಕಡಿಮೆ ಆಗುತ್ತಿರುವುದರಿಂದ ಸರ್ಕಾರ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗಗಳಲ್ಲಿ ಹೆಚ್ಚು ನಾಟಿ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿರುವುದನ್ನು ನಾವು ನೋಡುತ್ತಿದ್ದೆವು. ಆದರೆ ಈಗ ನಕಲಿ ವೈದ್ಯ, ನಕಲಿ ಔಷಧ ಹಾವಳಿ ಹೆಚ್ಚಾಗಿದ್ದು , ಸರ್ಕಾರ ಇದನ್ನು ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಅಯುಷ್ ಅಧಿಕಾರಿ ಡಾ.ಪುಷ್ಪಾ, ಔಷಧ ಪರಿವೀಕ್ಷಕರಾದ ಡಾ.ವೇದಾವತಿ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ತಾಪಂ ಮಾಜಿ ಸದಸ್ಯ ಹನುಮಂತು, ವೈದ್ಯರಾದ ಡಾ.ಯತೀಶ್, ಡಾ.ಲಕ್ಷ್ಮೀಕಾಂತ, ಡಾ.ಕುಮಾರ್, ಡಾ.ಪಿ.ರಾಘವೇಂದ್ರ ಆಚಾರ್ಯ, ಡಾ. ನೇಮಿನಾ ಘೋರ್ಪಡೆ, ಡಾ.ಶ್ರೀಧರಮೂರ್ತಿ, ಡಾ.ಅಶೋಕ್, ಮುಖಂಡರಾದ ಬಾಲಕೃಷ್ಣ, ವಿಜಯರಮೇಶ್, ಶಿವಕುಮಾರ, ದಿನೇಶ್‌ಗೌಡ ಇತರರು ಇದ್ದರು.