ಉದ್ಯಾನ ಉಳಿಸಿ, ಸರ್ಕಾರಿ ಜಾಗ ರಕ್ಷಿಸಿ

Saibanna jamadar
Published on

ಕಲಬುರಗಿ: ಸರ್ಕಾರಿ ಗೈರಾಣ, ಉದ್ಯಾನಗಳನ್ನು ಕಬಳಿಸಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಸರ್ಕಾರ ಇಂತಹ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆದು, ಅಕ್ರಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ಸೈಬಣ್ಣ ಜಮಾದಾರ ಆಗ್ರಹಿಸಿದರು.

ಬ್ರಹ್ಮಪುರದ ಸರ್ವೇ ನಂ.೭೪, ಕುಸನೂರದ ಸರ್ವೇ ೧೭೬/೨, ದದ್ದಾಪುರದ ಸರ್ವೇ ೧೨ರಲ್ಲಿ ಅಕ್ರಮ, ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಬ್ರಹ್ಮಪುರದ ಸರ್ವೇ ನಂ.೭೪ರ ಉದ್ಯಾನದ ಸ್ಥಳದಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಿದ್ದು, ಒಟ್ಟು ೩೫ ನಿವೇಶನ ಸರ್ಕಾರಿ ಉದ್ಯಾನದಲ್ಲಿ ಇರುವ ಬಗ್ಗೆ ಸರ್ಕಾರ ತಂಡ ರಚಿಸಿ, ತನಿಖೆ ನಡೆಸಿದ್ದು, ಅನಧಿಕೃತ ಎಂಬುದು ತನಿಖೆಯಲ್ಲಿ ಹೊರಬಿದ್ದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದಲ್ಲಿ ಹಲವು ಉದ್ಯಾನಗಳು ಒತ್ತುವರಿ, ಅನಧಿಕೃತ ಸರ್ಕಾರಿ ಗೈರಾಣಗಳಲ್ಲಿ ಕಟ್ಟಡ ನಿರ್ಮಿಸಿದ್ದು, ಅದರ ವಿರುದ್ಧ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೊರೆ ಹೋಗಲಾಗುವುದು. ಇದಲ್ಲದೆ ನಗರದಲ್ಲಿ ಏಳು ಕೆರೆಗಳು ಮುಳುಗಿ ಹೋಗಿದ್ದು, ಕಟ್ಟಡ ನಿರ್ಮಿಸಲಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯಶ್ವಂತರಾವ ಸೂರ್ಯವಂಶಿ, ವಿಜಯಕುಮಾರ ಮಠಪತಿ, ವಿಜಯ ಜಾಧವ್, ತಿಪ್ಪಣ್ಣ ಪವಾರ, ರಾಮು ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net