ಉದ್ಯಾನ ಇಲ್ಲದ ಬಸವನಗುಡಿ

26NGD4
Published on

ನಂಜನಗೂಡು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಂಜನಗೂಡಿನಲ್ಲಿ ನಿರ್ಮಾಣಗೊಂಡ ಮೊದಲ ಬಡಾವಣೆ ಎಂಬ ಕೀರ್ತಿಗೆ ಭಾಜನವಾಗಿರುವ ಬಸವನಗುಡಿ ಬ್ಲಾಕ್ ಬಡಾವಣೆಯಲ್ಲಿ ಉದ್ಯಾನವೇ ಇಲ್ಲ! ಸಿಎ ನಿವೇಶನ ಯಾವುದೆಂದು ತಿಳಿಯುತ್ತಿಲ್ಲ!


ಉದ್ಯಾನ, ಸಿಎ ನಿವೇಶನಕ್ಕಾಗಿ ಖಾಲಿ ಜಾಗ ಬಿಡಲಾಗಿದೆ ಎಂದು ನಂಬಿದ್ದ ಸ್ಥಳೀಯರಿಗೆ ಇದೀಗ ಶಾಕ್ ಆಗಿದ್ದು, ಆ ಜಾಗವನ್ನೂ ನಿವೇಶನಗಳನ್ನಾಗಿ ಪರಿವರ್ತಿಸಿ ಹರಾಜಿಗೆ ಮುಂದಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.


ಮೈಸೂರಿನಿಂದ ನಂಜನಗೂಡು ಪುರ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿರುವ ಬಸವನಗುಡಿ ಬ್ಲಾಕ್ ಬಡಾವಣೆಯನ್ನು 25 ವರ್ಷಗಳ ಹಿಂದೆ ಮುಡಾದಿಂದ ನಿರ್ಮಾಣ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಂಜನಗೂಡಿನಲ್ಲಿ ಮುಡಾದಿಂದ ನಿರ್ಮಾಣಗೊಂಡಿರುವ ಹಲವಾರು ಬಡಾವಣೆಗಳಲ್ಲಿ ಸುಸಜ್ಜಿತವಾದ ಉದ್ಯಾನ ನಿರ್ಮಿಸಿ, ಸಿಎ ನಿವೇಶನಗಳನ್ನು ಗುರುತಿಸಲಾಗಿದೆ. ಆದರೆ 5.2 ಎಕರೆ ವಿಸ್ತೀರ್ಣ ಹಾಗೂ 72 ಮನೆಗಳಿರುವ ಈ ಬಡಾವಣೆಯಲ್ಲಿ ಉದ್ಯಾನವೇ ಇಲ್ಲ. ಉದ್ಯಾನಕ್ಕಾಗಿ ಮೀಸಲಿಟ್ಟಿರುವ ಜಾಗ ಅತ್ಯಂತ ಕಿರಿದಾಗಿದ್ದು, ದಾಖಲೆಗಳಲ್ಲಿ ತೋರಿಸುವ ಸಲುವಾಗಿ ನಾಮ್ ಕೇ ವಾಸ್ತೆಗಾಗಿ ಜಾಗ ಬಿಡಲಾಗಿದೆ. ಅಲ್ಲಿ ಪಾರ್ಕ್ ಅಭಿವೃದ್ಧಿ ಮಾಡುವಷ್ಟು ಸ್ಥಳಾವಕಾಶವಿಲ್ಲ. ಇದುವರೆಗೂ ಯಾವುದೇ ಅಭಿವೃದ್ಧಿಯನ್ನೂ ಮಾಡಿಲ್ಲ ಎಂಬುದು ಸ್ಥಳೀಯರ ಆರೋಪ.
ಹರಾಜು ನಿಲ್ಲಿಸಿ, ಪಾರ್ಕ್ ಮಾಡಿ: ಮುಡಾ ವತಿಯಿಂದ ಬಸವನಗುಡಿ ಬ್ಲಾಕ್ ಬಡಾವಣೆಯಲ್ಲಿ 5 ಎಂಐಜಿ ಹಾಗೂ 2 ಎಚ್‌ಐಜಿ ಸೇರಿ ಒಟ್ಟು ಏಳು ನಿವೇಶನಗಳನ್ನು ಆ.28ರಂದು ಇ-ಹರಾಜು ಮೂಲಕ ನೇರ ಬಿಡ್ಡಿಂಗ್ ಕರೆಯಲಾಗಿದೆ. ಉದ್ಯಾನ ಹಾಗೂ ಸಿಎ ನಿವೇಶನಕ್ಕಾಗಿ ಜಾಗ ಬಿಡಲಾಗಿದೆ ಎಂದು ಸ್ಥಳೀಯರು ನಂಬಿದ್ದ ಜಾಗವನ್ನೇ ಇದೀಗ ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿರುವುದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ. ಈ ನಿವೇಶನಗಳನ್ನು ಮಾರಾಟ ಮಾಡಿಬಿಟ್ಟರೆ 5 ಎಕರೆ ವಿಸ್ತೀರ್ಣವಿರುವ ಈ ಬಡಾವಣೆಯಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣ ಮಾಡುವುದು ಕನಸಾಗಿಯೇ ಉಳಿಯಲಿದೆ. ಇನ್ನು ಸಿಎ ನಿವೇಶನ ಯಾವುದೆಂಬುದು ತಿಳಿದಿಲ್ಲ.


ಹಾಗಾಗಿ ಕೂಡಲೇ ಮುಡಾ ವತಿಯಿಂದ ಇ-ಹರಾಜಿನಲ್ಲಿ ಕರೆಯಲಾಗಿರುವ ನಿವೇಶನಗಳನ್ನು ನೇರ ಬಿಡ್ಡಿಂಗ್ ಪ್ರಕ್ರಿಯೆಯನ್ನು ಕೈಬಿಡಬೇಕು. ಉದ್ಯಾನಕ್ಕೆ ಸೂಕ್ತ ಸ್ಥಳಾವಕಾಶ ಹಾಗೂ ಸಿಎ ನಿವೇಶನವನ್ನು ಗುರುತಿಸಿ ನಂತರ ಉಳಿದ ನಿವೇಶನಗಳನ್ನು ಹರಾಜು ಮಾಡಿಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ ಎಂಬುದು ಸ್ಥಳೀಯರ ಕೂಗಾಗಿದೆ.

ಕರವೇ ಅಧ್ಯಕ್ಷರಿಂದ ದೂರು: ಒಂದು ಎಕರೆ ಪ್ರದೇಶದಲ್ಲಿ ಬಡಾವಣೆ ಅಭಿವೃದ್ಧಿ ಮಾಡಬೇಕಾದರೂ ಪಾರ್ಕ್ ಹಾಗೂ ಸಿಎ ನಿವೇಶನಕ್ಕೆ ಸೂಕ್ತ ಸ್ಥಳಾವಕಾಶ ಗುರುತಿಸುವ ಮುಡಾ ಅಧಿಕಾರಿಗಳು ಬಸವನಗುಡಿ ಬ್ಲಾಕ್‌ನಲ್ಲಿ ಏಕೆ ಇದುವರೆಗೂ ಪಾರ್ಕ್ ನಿರ್ಮಾಣ ಮಾಡಿಲ್ಲ ಎಂದು ಪ್ರಶ್ನಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್ ಮುಡಾ ಆಯುಕ್ತರಿಗೆ ದೂರು ನೀಡಿದ್ದಾರೆ.
ಬಸವನಗುಡಿ ಬ್ಲಾಕ್‌ನ ಐದು ಎಕರೆ ವಿಸ್ತೀರ್ಣದಲ್ಲಿ ಶೇ.15 ರಿಂದ 20ರಷ್ಟು ಸ್ಥಳವನ್ನು ಪಾರ್ಕ್ ಹಾಗೂ ಇನ್ನಿತರ ಚಟುವಟಿಕೆಗಳಿಗಾಗಿ ಮೀಸಲಿಟ್ಟಿದ್ದೇವೆ ಎಂದು ನಕ್ಷೆಯಲ್ಲಿ ತೋರಿಸಲಾಗಿದೆ. ಆದರೆ ಆ ಸ್ಥಳ ಎಲ್ಲಿದೆ ಎಂಬುದನ್ನು ಸ್ವತಃ ಮುಡಾ ಅಧಿಕಾರಿಗಳೇ ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಬಡಾವಣೆ ನಿರ್ಮಾಣ ಮಾಡುವ ವೇಳೆ ಮುಡಾ ಅಧಿಕಾರಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗಾಗಿ ನಕ್ಷೆಯಲ್ಲಿ ನಮೂದಿಸಿರುವಂತೆ ಶೇ.15ರಷ್ಟು ಜಾಗವನ್ನು ಪಾರ್ಕ್ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಿಟ್ಟಿರುವುದನ್ನು ಖಚಿತ ಮಾಡಿ ನಂತರ ಉಳಿದ ನಿವೇಶನಗಳನ್ನು ಹರಾಜು ಮಾಡಲಿ ಎಂದು ಒತ್ತಾಯಿಸಿದ್ದಾರೆ.


ಕಣ್ಣೊರೆಸುವ ತಂತ್ರ: ಇ-ಹರಾಜು ಪ್ರಕ್ರಿಯೆಗೆ ಒಳಪಡಿಸಿರುವ ಜಾಗ ನಿವೇಶನಗಳೇ ಹೊರತು ಪಾರ್ಕ್ ಜಾಗವಲ್ಲ. ಆದರೆ, ಸ್ಥಳೀಯರು ಈ ನಿವೇಶನಗಳ ಜಾಗವನ್ನು ದುರುಪಯೋಗಪಡಿಸಿಕೊಳ್ಳುವ ಸಲುವಾಗಿ ಈ ರೀತಿ ವಿವಾದ ಹುಟ್ಟು ಹಾಕುತ್ತಿದ್ದಾರೆ. ಆದರೆ, ಕೆಲ ಸ್ಥಳೀಯರೇ ಈ ನಿವೇಶನಗಳ ಹರಾಜಿಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಮುಡಾ ಎಇಇ ಮಹೇಶ್ ಪತ್ರಿಕೆಗೆ ತಿಳಿಸಿದ್ದಾರೆ.
ಇವರು ಹೇಳುವ ಪ್ರಕಾರ ಈ ಖಾಲಿ ಜಾಗ ನಿವೇಶನಗಳೇ ಆಗಿದ್ದಲ್ಲಿ ಸ್ಥಳೀಯರು ಕೇಳುತ್ತಿರುವ ಉದ್ಯಾನ ಹಾಗೂ ಸಿಎ ನಿವೇಶನಗಳು ಎಲ್ಲಿ ಎಂಬ ಪ್ರಶ್ನೆಗೆ ಮುಡಾ ಅಧಿಕಾರಿಗಳ ಬಳಿ ಉತ್ತರವಿಲ್ಲ. ಈಗಾಗಲೇ ಪಾರ್ಕ್‌ಗಾಗಿ ಗುರುತಿಸಿರುವ ಜಾಗ ಅತ್ಯಂತ ಚಿಕ್ಕದು. ಆ ಜಾಗವನ್ನು ನೋಡಿದರೆ ಇದು ಪಾರ್ಕ್‌ಗೆ ಸೂಕ್ತವಾದುದಲ್ಲ ಎಂಬುದು ಮೇಲ್ನೋಟಕ್ಕೆ ಅನಿಸಿಬಿಡುತ್ತದೆ. ಪಾರ್ಕ್ ಇಲ್ಲದೇ ಸ್ಥಳೀಯರು ವಾಕ್ ಮಾಡಲು, ಮಕ್ಕಳು ಆಟವಾಡಲು ಜಾಗವೇ ಇಲ್ಲದಂತಾಗಿದೆ.


ಹೀಗಾಗಿ ಪಾರ್ಕ್‌ಗಾಗಿ ಬಿಟ್ಟಿರುವ ಕಿರಿದಾದ ಜಾಗವನ್ನೇ ನಿವೇಶನಗಳನ್ನಾಗಿ ಮಾರಾಟ ಮಾಡಿಕೊಳ್ಳಲಿ, ಈ ಖಾಲಿ ಇರುವ ಜಾಗ ಉದ್ಯಾನಕ್ಕೆ ಸೂಕ್ತವಾಗಿದ್ದು, ಕೂಡಲೇ ಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net