ಉದ್ಯಮಿಗಳು ಸರ್ಕಾರಿ ಯೋಜನೆಗಳ ಲಾಭ ಪಡೆದುಕೊಳ್ಳಬೇಕು

22BGV-1
ಬೆಳಗಾವಿ ನಗರದ ಉದ್ಯಮಭಾಗದಲ್ಲಿರುವ ಕೆನರಾ ಬ್ಯಾಂಕಿನ ಎಂಎಸ್‌ಎಂಇ ಶಾಖೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಉದ್ಯಮಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಿಜಿಎಂ ಠಾಕೂರ ನಾಯಕ್ ಮಾತನಾಡಿದರು. ಎಜಿಎಂ ಶೀಬಾ ಸಹಜನ್, ಡಿಎಂ ವಿನೋದ ಸಹಯೋಗಿ, ಪ್ರಬಂಧಕ ರಾಘವೇಂದ್ರ ರಡ್ಡೇರ್ ಇದ್ದರು.
Published on

ಬೆಳಗಾವಿ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಆರ್ಥಿಕ ನೆರವು ನೀಡುವುದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಉದ್ಯಮಿಗಳು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೆನರಾ ಬ್ಯಾಂಕಿನ ಉಪಪ್ರಧಾನ ವ್ಯವಸ್ಥಾಪಕ ಠಾಕೂರ ನಾಯಕ್ ಅವರು ಹೇಳಿದರು.
ನಗರದ ಉದ್ಯಮಭಾಗದಲ್ಲಿರುವ ಕೆನರಾ ಬ್ಯಾಂಕಿನ ಎಂಎಸ್‌ಎಂಇ ಶಾಖೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಉದ್ಯಮಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಣ್ಣ ಹಾಗೂ ಮಧ್ಯಮ ಉದ್ಯಮಿಗಳ ಆರ್ಥಿಕ ಅಗತ್ಯಗಳನ್ನು ಪೂರೈಸುವುದರಲ್ಲಿ ಕೆನರಾ ಬ್ಯಾಂಕ್ ಮುಂಚೂಣಿಯಲ್ಲಿದ್ದು, ತಾವೆಲ್ಲರೂ ಇದರ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಜತೆಗೆ ದೇಶದ ಆರ್ಥಿಕ ಅಭಿವೃದ್ಧಿಗೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಠಾಕೂರ ನಾಯಕ ಮನವಿ ಮಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ಎಜಿಎಂ ಶೀಬಾ ಸಹಜನ್ ಸಲಹೆ ನೀಡಿದರು.
ರಾಷ್ಟ್ರದ ಒಟ್ಟು ಆದಾಯಕ್ಕೆ ಶೇ.48ರಷ್ಟು ಆದಾಯವು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಂದ ನೀಡುವ ತೆರಿಗೆ ಮೂಲಕ ಪಾವತಿಯಾಗುತ್ತದೆ ಎಂದು ಹುಬ್ಬಳ್ಳಿ ಕೆನರಾ ಬ್ಯಾಂಕಿನ ವೃತ್ತ ಕಚೇರಿಯ ಪ್ರಬಂಧಕ ರಾಘವೇಂದ್ರ ರಡ್ಡೇರ್ ಹೇಳಿದರು. ಎಂಎಸ್‌ಎಂಇ ಮೂಲಕ ಇಡೀ ದೇಶದಲ್ಲಿ ವರ್ಷಕ್ಕೆ 12 ಕೋಟಿ ಜನರಿಗೆ ಉದ್ಯೋಗ ಸೃಷ್ಠಿಯಾಗುತ್ತಿದೆ. ಅದಕ್ಕಾಗಿ ಸರ್ಕಾರ ಎಂಎಸ್ ಎಂಇ ಕ್ಷೇತ್ರಕ್ಕೆ ಅನೇಕ ಪ್ರೋತ್ಸಾಹಗಳನ್ನು ನೀಡುತ್ತಲಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಎಜಿಎಂ ಶೀಬಾ ಸಹಜನ್, ಡಿಎಂ ವಿನೋದ ಸಹಯೋಗಿ, ಹಿರಿಯ ವ್ಯವಸ್ಥಾಪಕ ಸಚಿನ್ ಸಾಗರ, ಬ್ಯಾಂಕಿನ ವ್ಯವಸ್ಥಾಪಕರಾದ ಎಸ್.ರಾಜಶೇಖರ್, ರಾಘವೇಂದ್ರ ನಾಯಕ್, ಐ.ಶ್ರೀನಿವಾಸಲು, ವಿವೇಕ ಗಣವೀರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net