ಉದ್ಯಮಿಗಳ ಅಹವಾಲು ಆಲಿಸಿದ ಡಿಸಿ

0510 KLB 04
Published on

ಕಲಬುರಗಿ: ನಗರದ ಹೊರವಲಯದ ಶಹಾಬಾದ್ ರಸ್ತೆಯಲ್ಲಿರುವ ನಂದೂರ- ಕೆಸರಟಗಿ ಮತ್ತು ಹುಮನಾಬಾದ್ ರಸ್ತೆಯಲ್ಲಿನ ಕಪನೂರ ಕೈಗಾರಿಕಾ ಪ್ರದೇಶದ ವಿವಿಧ ಕೈಗಾರಿಕಾ ಘಟಕಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶನಿವಾರ ಭೇಟಿ ನೀಡಿ, ಉದ್ಯಮಿದಾರರ ಜತೆಗೆ ಸಮಾಲೋಚನೆ ನಡೆಸಿ, ಅಹವಾಲು ಆಲಿಸಿದರು.
ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದ ೩ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಕೈಗಾರಿಕಾಭಿವೃದ್ಧಿಗೆ ೬೦೦ ಎಕರೆ ಭೂಮಿ ಭೂಸ್ವಾಧೀನ ಪಡಿಸುತ್ತಿರುವ ಸ್ಥಳ ಪರಿಶೀಲಿಸಿ, ಕೆಐಎಡಿಬಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸುಮಾರು ೧೫ ಕೋಟಿ ರೂ.ವೆಚ್ಚದಲ್ಲಿ ಕೆಐಎಡಿಬಿ ಮೂಲಕ ನಿರ್ಮಿಸುತ್ತಿರುವ ಪ್ಲಗ್ ಆ್ಯಂಡ್ ಪ್ಲೇ ಕಟ್ಟಡ ಕಾಮಗಾರಿ ಪರಿಶೀಲಿಸಿ, ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೈಗಾರಿಕಾ ವಸಾಹತು ಪ್ರದೇಶದಲ್ಲಿ ೫೦ ಎಕರೆಯಲ್ಲಿ ಗುಲ್ಬರ್ಗ ಟೆಕ್ಸ್ಟೈಲ್ ಪಾರ್ಕ್ಗೆ, ೪೦ ಎಕರೆಯಲ್ಲಿ ನಿರ್ಮಿಸುತ್ತಿರುವ ಮಹಿಳಾ ಪಾರ್ಕ್ಗೆ ಭೇಟಿ ನೀಡಿ ಮೂಲ ಸೌಕರ್ಯಕ್ಕಾಗಿ ನಡೆಯುತ್ತಿರುವ ಕಾಮಗಾರಿ ಜಿಲ್ಲಾಧಿಕಾರಿ ವೀಕ್ಷಿಸಿದರು.
ಹುಮನಾಬಾದ್ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ ಪ್ರದೇಶದ ೩ನೇ ಹಂತದಲ್ಲಿ ಸುಮಾರು ೨೦ ಎಕರೆ ಜಾಗದಲ್ಲಿ ಹೊಸದಾಗಿ ಸ್ಥಾಪಿಸಲು ಉz್ದೆÃಶಿಸಿರುವ ಆಟೋ ಪಾರ್ಕ್, ಐಟಿ ಹಬ್ ಹಾಗೂ ಫ್ಲಾÈಟ್ ಫ್ಯಾಕ್ಟರಿ ಸ್ಥಳಕ್ಕೆ ಭೇಟಿ ನೀಡಿ, ಭೂಮಿ ಪರಿಶೀಲಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ, ಉಪ ನಿರ್ದೇಶಕ ಅಬ್ದುಲ್ ಅಜೀಂ, ಕೆಐಎಡಿಬಿ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಖಂಡ್ರೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪರಮೇಶ್ವರ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿವಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net