

ಹುಬ್ಬಳ್ಳಿ: ಕೈಗಾರಿಕಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಾಗಿ 5 ವಿಭಾಗಗಳಲ್ಲಿ ಉದ್ಯಮಿರತ್ನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಮಾರ್ಚ್ 4ರಂದು ಸಂಜೆ 4 ಗಂಟೆಗೆ ಹುಬ್ಬಳ್ಳಿ ಗೋಕುಲ ರಸ್ತೆಯ ಕ್ಯೂಬಿಕ್ಸ್ ಹೊಟೇಲ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜೆ.ಸಿ. ಮಠದ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳು, ಮಹಿಳಾ ಉದ್ಯಮಿ ಹಾಗೂ ಸ್ಟಾರ್ಟಪ್ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಗಾಗಿ ಫೆ. 15ರೊಳಗೆ ಸಂಘದ ಕಚೇರಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಸುಮಾರು 60 ಅರ್ಜಿಗಳು ಬಂದಿವೆ. ಸಂಘವು ಉತ್ತರ ಕರ್ನಾಟಕದ 13 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಆಯಾ ಜಿಲ್ಲೆಯ ಸಂಘಗಳಿಗೆ ಅರ್ಜಿಗಳನ್ನು ಪೂರೈಸಲಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧಾರವಾಡ ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿ, ಜ್ಯೋತಿ ಲ್ಯಾಬ್ಸ್ ಎಂಡಿ ಉಲ್ಲಾಸ ಕಾಮತ್, ವೇಗಾ ಹೆಲ್ಮೆಟ್ಸ್ ಎಂಡಿ ದಿಲೀಪ್ ಚಂಡಕ್ ಪಾಲ್ಗೊಳ್ಳುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ ಅವರನ್ನು ಆಹ್ವಾನಿಸಲಾಗಿದೆ. ಈ ವೇದಿಕೆಯಲ್ಲಿ ಉತ್ತರ ಕರ್ನಾಟಕ ಕೈಗಾರಿಕಾ ಅಭಿವೃದ್ಧಿಯ ಬಗ್ಗೆ ಸಂವಾದ ನಡೆಸಲಾಗುವುದು ಎಂದರು.