

ಮೈಸೂರು: ಉದ್ಯಮ ಅಭಿವೃದ್ಧಿ ಅಂತಿಮವಾಗಿ ಸಾಮಾಜಿಕ ಸೇವೆಯೇ ಆಗಬೇಕು ಎಂದು ‘ಶ್ರೀಕಾಂತ್’ ಹಿಂದಿ ಸಿನಿಮಾಕ್ಕೆ ಪ್ರೇರಣೆಯಾದ ನವೋದ್ಯಮಿ ಅಂಧ ಶ್ರೀಕಾಂತ್ ಬೊಳ್ಳ ಹೇಳಿದರು.
ನಗರದ ಅರಮನೆ ಆವರಣದಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)
ಆಯೋಜಿಸಿದ್ದ ಟಿಐಇ ಜಾಗತಿಕ ಶೃಂಗ-2024 ಕಾರ್ಯಕ್ರಮದಲ್ಲಿ ಗ್ಲೋಬಲ್ ಸೂಪರ್ ಸ್ಟಾರ್ಸ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸ್ಥಾಪಿಸಿದ ಉದ್ಯಮ ನೂರಾರು ಕುಟುಂಬಗಳಿಗೆ ಅನುಕೂಲವಾಗಬೇಕು. ನಮ್ಮ ಒಂದು ಆಲೋಚನೆ ಯಶಸ್ಸಿನ ದಾರಿಯಾದರೆ ಅದಕ್ಕಿಂತ ಸಾಧನೆ ಮತ್ತೊಂದಿಲ್ಲ.
ಆದ್ದರಿಂದ ಸಮಾಜ ಹಾಗೂ ಜನರಿಗಾಗಿ ಪರಿಶ್ರಮ ಪಡಬೇಕು. ಉದ್ಯಮಶೀಲತೆ ಎಂಬುದು ಅಧ್ಯಾತ್ಮದ ಪಯಣ ಅಷ್ಟೇ ಆಗಿರುವುದಿಲ್ಲ. ಕಟ್ಟಕಡೆಯದಾಗಿ ಅದೊಂದು ಏಕಾಂಗಿ ಯಾನವಾಗಿರುತ್ತದೆ. ಪರಿಶ್ರಮವಷ್ಟೇ ಯಶಸ್ಸಿನ ರಹಸ್ಯ ಎಂದರು.
ಯಾರೋ ಒಬ್ಬರು ಬಂದು ವ್ಯವಸ್ಥೆ ಪರಿವರ್ತನೆ ಮಾಡುತ್ತಾರೆ ಎಂದು ಕಾಯುತ್ತಾ ಕೂರುವ ಯೋಚನೆಯು ನವೋದ್ಯಮಿಗಳಿಗೆ ಎಂದೂ ಬರಬಾರದು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಬೇಕು.
ನಾನೂ ಹಾಗೆಯೇ ಅಂದುಕೊಂಡಿದ್ದೆ, ಹೀಗಾಗಿಯೇ ಮೈಸೂರಿನ ಅರಮನೆಯ ಎದುರು ನಿಂತಿದ್ದೇನೆ. ನಾನೊಬ್ಬನೇ ಇಲ್ಲಿ ನಿಂತಿಲ್ಲ. ನನ್ನೊಂದಿಗೆ ನಿಂತ ಕಂಪನಿಯ ಎಲ್ಲ ಕೆಲಸಗಾರರು, ಹೂಡಿಕೆದಾರರ ಪರಿಶ್ರಮವು ಇಲ್ಲಿಗೆ ಕರೆ ತಂದು ನಿಲ್ಲಿಸಿದೆ ಎಂದರು.
ಇದೇ ವೇಳೆ 18 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು, ಸಿಇಒ ಸಂಜೀವ್ ಗುಪ್ತಾ, ಟಿಜಿಎಸ್ ಅಧ್ಯಕ್ಷ ಮದನ್ ಪದಕಿ, ಎಕ್ಸೆಲ್ ಸಾಫ್ಟ್ ಸಿಇಒ ಸುಧನ್ವ ಧನಂಜಯ, ಟಿಐಇ ಮೈಸೂರು ವಿಭಾಗದ ಮಹೇಶ್ ರಾವ್, ಉದ್ಯಮಿಗಳಾದ ಅರ್ಜುನ್ ರಂಗಾ, ನಂದ ಕಿಶೋರ್ ಚೌಧರಿ, ವಿನಯ್ ಪರಮೇಶ್ವರಪ್ಪ, ಪಾಯಲ್‌ನಾಥ್, ಸಹರ್ ಮನ್ಸೂರ್ ಇದ್ದರು.