ಉದ್ದು, ಹೆಸರು ಖರೀದಿ ಮಿತಿ ಹೆಚ್ಚಿಸಿ

Rait Sang
Published on

ಬೀದರ್: ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಹೆಸರು ಖರೀದಿ ಮಿತಿ 20 ಕ್ವಿಂಟಾಲ್ಗೆ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ರೈತ ಸಂಘ (ಪುಟ್ಟಣಯ್ಯ ಬಣ) ಶಿವನಗರದಲ್ಲಿರುವ ಸಂಸದ ಭಗವಂತ ಖೂಬಾ ಮನೆ ಎದುರು ಶನಿವಾರ ಪ್ರತಿಭಟನೆ ನಡೆಸಿತು.

ಆಹಾರ ಧಾನ್ಯ ಖರೀದಿಗೆ ಮಿತಿ ಹಾಕುವ ಮೂಲಕ ರೈತರ ಮೂಗಿಗೆ ತುಪ್ಪ ಬಳಿಯುವ ಕೆಲಸ ಸರ್ಕಾರ ಮಾಡುತ್ತಿದೆ. ಕೂಡಲೇ ಈ ಮಿತಿ ತೆಗೆದು ಕನಿಷ್ಠ 20 ಕ್ವಿಂಟಾಲ್ ಖರೀದಿಗೆ ಅವಕಾಶ ಕೊಡುವಂತೆ ಸಂಘದ ಪ್ರಮುಖರು ಆಗ್ರಹಿಸಿದರು.

ಒಬ್ಬ ರೈತನಿಂದ ಕೇವಲ 4 ಕ್ವಿಂಟಾಲ್ ಉದ್ದು ಮತ್ತು 6 ಕ್ವಿಂಟಾಲ್ ಹೆಸರು ಖರೀದಿಗೆ ಮಿತಿ ಹೇರಿ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎನ್ನುವ ಸರ್ಕಾರ ಖರೀದಿಗೆ ಮಿತಿ ಹಾಕುವುದು ಸರಿಯಲ್ಲ. ಕೂಡಲೇ ಈ ಮಿತಿ ಕೈಬಿಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ರೈತರು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಸರ್ಕಾರ ಅನ್ನದಾತರ ವಿರುದ್ಧವಾದ ವಿವಿಧ ಮಸೂದೆಗಳನ್ನು ಜಾರಿಗೆ ತರುತ್ತ ಮತ್ತಷ್ಟು ಸಂಕಷ್ಟ ಕೊಡುತ್ತಿದೆ. ರೈತ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು. ಅಧಿಕ ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿ ರೈತರು ಸಾಲಗಾರರಾಗಿದ್ದಾರೆ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಸ್ಥೆಗಳನ್ನು ಒಳಗೊಂಡು ಎಲ್ಲ ಸಾಲ ಮನ್ನಾ ಮಾಡಬೇಕು. ಹೊಸ ಸಾಲ ಕೊಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದ ಪ್ರತಿಭಟನೆಯಲ್ಲಿ ಪ್ರಮುಖರಾದ ನಾಗಶೆಟ್ಟೆಪ್ಪ ಲಂಜವಾಡೆ, ಶಾಂತಮ್ಮ ಮೂಲಗೆ, ಬಸವರಾಜ ಅಷ್ಟೂರ್, ನಾಗೇಂದ್ರಪ್ಪ ತರನಳ್ಳಿ, ವಿಶ್ವನಾಥ ಚಿಲಶೆಟ್ಟೆ, ಪ್ರಕಾಶ ಅಲ್ಮಾಜೆ, ಹಾವಗಿರಾವ ವಟಗೆ, ಸಂಗಶೆಟ್ಟಿ ಖೇಡ್, ಪ್ರಭುದಾಸ ಸಂತಪುರ, ವಿಠ್ಠಲರಾವ ಮೇತ್ರೆ, ಸುಭಾಷ ಪಾಟೀಲ್, ಪರಮೇಶ್ವರ ಗೌರ, ಶಿವಕಾಂತ ಖಂಡೆ, ಸಂಜು ಪಾಟೀಲ್, ಸನ್ಮುಖಪ್ಪ ಆಣದೂರ, ವಿಜಯಕುಮಾರ ಇತರರಿದ್ದರು.
ಬೇಡಿಕೆ ಸಂಬಂದ ಸಂಸದ ಭಗವಂತ ಖೂಬಾ ಅವರಿಗೆ ಬರೆದ ಮನವಿ ಪತ್ರವನ್ನು ಆಪ್ತ ಸಹಾಯಕ ಅಮರ ಹಿರೇಮಠ ಅವರಿಗೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net