ಉದ್ಘಾಟನೆಗೊಂಡರೂ ಬಸ್‌ಗಳ ಓಡಾಟ ಇಲ್ಲ!

5dvk 1A
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.20416667, 0.39909735);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34;
Published on

ಡಿ.ವಿ.ಕಮ್ಮಾರ ಬೆಳಗಾವಿ

ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಉದ್ಘಾಟನೆಗೊಂಡಿರುವ ಇಲ್ಲಿನ ನಗರ ಸಾರಿಗೆಯ ನೂತನ ಬಸ್ ನಿಲ್ದಾಣ ಗುತ್ತಿಗೆದಾರರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಗೊಂಡಿಲ್ಲ. ಹೀಗಾಗಿ ಇಲ್ಲಿಂದ ಬಸ್ ಓಡಾಟ ಆರಂಭಗೊಳ್ಳುವುದು ವಿಳಂಬವಾಗಲಿದೆ.

ಸ್ಮಾರ್ಟ್‌ಸಿಟಿ ಯೋಜನೆಯಡಿ ಅಪೂರ್ವ ಕನಸ್ಟ್ರಕ್ಷನ್ಸ್‌ನಿಂದ ಒಟ್ಟು 2 ಎಕರೆ 19 ಗುಂಟೆ ಜಾಗದಲ್ಲಿ 49.8 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ಸ್ಮಾರ್ಟ್ ಆಗಿ ನಿರ್ಮಾಣಗೊಂಡಿದೆ. ನೆಲಮಹಡಿ, ಕೆಳಮಹಡಿ ಹಾಗೂ ಮೂರು ಮೇಲ್ಮಹಡಿ ಕಟ್ಟಡವಿದೆ. ಕೆಳಭಾಗದಲ್ಲಿ ಬಸ್‌ಗಳ ಒಟ್ಟು 28 ಅಂಕಣ (ಪ್ಲಾಟಫಾರ್ಮ್)ಗಳಿವೆ. ನೆಲಮಹಡಿ ಮತ್ತು ಎರಡು ಮೇಲ್ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ 3ನೇ ಮಹಡಿಯಲ್ಲಿ ಸಂಸ್ಥೆಯ ವಿಭಾಗೀಯ ಕಚೇರಿ ಮಾಡಲು ಯೋಚಿಸಿದ್ದಾರೆ. ಕಟ್ಟಡದಲ್ಲಿ ಎಕ್ಸಲೇಟರ್, ಲ್‌ಟಿ ಸೇರಿ ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಲಾಗಿದೆ.

ಹಿಂಬದಿ ಆವರಣ ಗೋಡೆ ಇಲ್ಲ: ಕಟ್ಟಡ ಅಧಿಕೃತವಾಗಿ ಹಸ್ತಾಂತರಗೊಳ್ಳುವ ಮುಂಚೆಯೇ ಉದ್ಘಾಟನೆಗೊಂಡಿದೆ. ಹೀಗಾಗಿ ನಿಲ್ದಾಣ ಆರಂಭಗೊಂಡಿದೆ ಎಂದುಕೊಂಡು ಅನೇಕರು ಭಾನುವಾರ ಬಂದು ನೋಡಿ, ಎಂದಿನಂತೆ ಕೇಂದ್ರ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಿಎಂ ಆಗಮನ ಮುಂಚಿತವಾಗಿ ನಿಗದಿಯಾಗಿತ್ತು. ಹೀಗಾಗಿ ವಿವಿಧ ಯೋಜನೆಗಳ ಉದ್ಘಾಟನೆಯಲ್ಲಿ ನಿಲ್ದಾಣವನ್ನೂ ಸೇರಿಸಲಾಗಿತ್ತು. ಸರ್ಕಾರಕ್ಕೆ ಹಸ್ತಾಂತರವಾಗದೆ ಉದ್ಘಾಟನೆ ಮಾಡಿದಂತಾಗಿದೆ.

ನಿಲ್ದಾಣದ ಹಿಂಬದಿಯಲ್ಲಿ ಆವರಣ ಗೋಡೆ ಇಲ್ಲ. ಆಳೆತ್ತೆರದ ಮಣ್ಣುಗುಡ್ಡೆಯಿದ್ದು, ಅದರಾಚೆಗೆ ನಿಗಮದ ಕಾರ್ಯಾಗಾರವಿದೆ. ಅದು ನೇರವಾಗಿ ಕಾಣುವಂತಿದೆ. ಜತೆಗೆ ಮಳೆ ಬಂದಾಗ ಮೇಲ್ಭಾಗದ ನೀರು ನಿಲ್ದಾಣಕ್ಕೆ ನುಗ್ಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇಲ್ಲಿ ಆವರಣ ಗೋಡೆ ಅಗತ್ಯವಿದ್ದು,ಕಟ್ಟಡದೊಳಗೆ ಒಂದಿಷ್ಟು ಸಣ್ಣಪುಟ್ಟ ಕೆಲಸಗಳು ಬಾಕಿಯಿವೆ. ಅವು ಪೂರ್ಣಗೊಂಡರೆ ಮಾತ್ರ ವಾಕರಸಾ ಸಂಸ್ಥೆ ಕಟ್ಟಡದ ಹಸ್ತಾಂತರಿಸಿಕೊಳ್ಳಲು ಮುಂದಾಗಬಹುದು. ಇದೆಲ್ಲ ಮುಗಿಯಲು ಮಾಸಾಂತ್ಯವರೆಗೂ ಸಮಯ ಹಿಡಿಯಬಹುದು.

1365 ಟ್ರಿಪ್ ಬಸ್ ಕಾರ್ಯಾಚರಣೆ: ನಗರ ಸಾರಿಗೆ ವ್ಯಾಪ್ತಿಯಲ್ಲಿ ನಿತ್ಯ 1365 ಟ್ರಿಪ್ ಬಸ್ ಕಾರ್ಯಾಚರಣೆ ಇದೆ. ಹೊಸ ನಿಲ್ದಾಣ ಕಾಮಗಾರಿ ಆರಂಭಗೊಂಡ ಬಳಿಕ ಈ ಕಾರ್ಯಾಚರಣೆ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದು, ಸದಾಕಾಲ ದಟ್ಟಣೆ ಇರುತ್ತದೆ. ಹೀಗಾಗಿ ಆದಷ್ಟು ಬೇಗ ಹೊಸ ನಗರ ಸಾರಿಗೆ ನಿಲ್ದಾಣ ಆರಂಭಗೊಂಡಲ್ಲಿ, ಮುಖ್ಯ ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಎಲ್ಲ ಕೆಲಸವೂ ಮುಗಿದಿದೆ. ಎಕ್ಸಲೇಟರ್, ಲಿಫ್ಟ್ ಸೇರಿ ಇಂತಹ ಹಲವು ಘಟಕಗಳಿವೆ. ಅವುಗಳ ಕಾರ್ಯ ವಿಧಾನದ ಬಗ್ಗೆ ಸಮಗ್ರವಾದ ಮಾಹಿತಿಯನ್ನು ವಾಕರಸಾ ಸಂಸ್ಥೆಯವರಿಗೆ ನೀಡಬೇಕಾಗುತ್ತದೆ. ಇದಕ್ಕಾಗಿಯೇ 2-3 ದಿನ ಬೇಕು. ಅದೆಲ್ಲ ಮುಗಿದ ತಕ್ಷಣವೇ ಹಸ್ತಾಂತರ ಮಾಡುತ್ತೇವೆ. | ಸಂಜಯ ನವಲಗುಂದ ಅಪೂರ್ವ ಕನಸ್ಟ್ರಕ್ಷನ್ಸ್ ಪ್ರತಿನಿಧಿ ಕಟ್ಟಡ ಹಸ್ತಾಂತರಕ್ಕಾಗಿ ಕಾಯುತ್ತಿದ್ದೇವೆ. ನಮ್ಮ ಸುಪರ್ದಿಗೆ ಸಿಕ್ಕ ತಕ್ಷಣ ಇಲ್ಲಿಂದಲೇ ಬಸ್ ಓಡಾಟ ಆರಂಭಗೊಳ್ಳುತ್ತದೆ. ಹಿಂಭಾಗದಲ್ಲಿ ಕಾರ್ಯಾಗಾರ ಕಾಣದಂತೆ ತಗಡಿನ ಸೀಟ್‌ಗಳ ಮೂಲಕ ಬ್ಯಾರಿಕೇಡ್ (ಕಾಂಪೌಂಡ್ ಮಾದರಿ) ಮಾಡುತ್ತೇವೆ. | ಕೆ.ಎಲ್.ಗುಡನ್ನವರ ವಿಭಾಗೀಯ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net