ಉದ್ಘಾಟನೆಗೆ ಬಾರದ ಸಚಿವರು: ಕಾದು ಕಾದು ಬಸವಳಿದ ಅತಿಥಿಗಳು

6
Published on

ಮೈಸೂರು: ನಗರದ ಕೆ.ಆರ್.ಮೊಹಲ್ಲಾದ ಉತ್ತರಾಧಿಮಠದ ರಸ್ತೆಯಲ್ಲಿ ನಿರ್ಮಾಣ ಆಗಿರುವ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ 1ರ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಲಾಯಿತು.


ಸದ್ಯಕ್ಕೆ ತ್ಯಾಗರಾಜ ರಸ್ತೆಯ ಅಕ್ಕಬಳಗ ಬಳಿ ಇರುವ ಈ ವಲಯ ಕಚೇರಿ ಶೀಘ್ರದಲ್ಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಪಾಲಿಕೆಯ ನಾಗರಿಕ ಸೇವಾ ಕೇಂದ್ರವೂ ಲೋಕಾರ್ಪಣೆಗೊಂಡಿದೆ.


1ನೇ ಹಂತದಲ್ಲಿ 99.60 ಲಕ್ಷ ರೂ., 2ನೇ ಹಂತದಲ್ಲಿ 1.72 ಲಕ್ಷ ರೂ. ಸೇರಿದಂತೆ ಅಂದಾಜು ಮೊತ್ತ 2.71 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ. 183 * 48 (8784 ಚದರ ಅಡಿ) ವಿಸ್ತಾರದ ಜಾಗದಲ್ಲಿ ನೆಲ ಮಹಡಿ ಸೇರಿದಂತೆ ಎರಡು ಮಹಡಿಯ ಕಟ್ಟಡ ಇದಾಗಿದೆ. ನೆಲ ಮಹಡಿಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 2ನೇ ಮಹಡಿಯಲ್ಲಿ ನಾಗರಿಕ ಸೇವಾ ಕೇಂದ್ರ, ಆರೋಗ್ಯ ಶಾಖೆ, ಕಂದಾಯ ಶಾಖೆ ಇರಲಿದೆ. 2ನೇ ಮಹಡಿಯಲ್ಲಿ ವಲಯ ಆಯುಕ್ತರ ಕಚೇರಿ, ಇಂಜಿನಿಯರಿಂಗ್ ಶಾಖೆ ಮತ್ತು ಸಭಾಂಗಣ ಇದೆ.


ಸಚಿವರಿಗೆ ಕಾಯ್ದು ಬಸವಳಿದ ಅತಿಥಿಗಳು:
ಕಾರ್ಯಕ್ರಮ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನಗರದಲ್ಲಿದ್ದರೂ ಗೈರಾದರು. ಇವರಿಗಾಗಿ ಕಾಯ್ದ ಅತಿಥಿಗಳು ಬಸವಳಿದರು.


ಕಾರ್ಯಕ್ರಮ ಬೆಳಗ್ಗೆ 11ಕ್ಕೆ ನಿಗದಿಯಾಗಿತ್ತು. ಶಾಸಕರಾದ ಟಿ.ಎಸ್.ಶ್ರೀವತ್ಸ, ತನ್ವೀರ್‌ಸೇಠ್, ಕೆ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮೇಯರ್ ಶಿವಕುಮಾರ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಆಗಮಿಸಿದ್ದರು. ಆದರೆ, ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿರುವ ಕಾರಣಕ್ಕೆ ಸಚಿವರು ಬರಲಿಲ್ಲ. ಇವರಿಗಾಗಿ ಎರಡು ತಾಸಿನವರೆಗೂ ಗಣ್ಯರು ಕಾಯ್ದರು. ಸಚಿವರು ಬರದೆ ಕಾರ್ಯಕ್ರಮ ಉದ್ಘಾಟನೆ ಆಗುವುದಿಲ್ಲ ಎಂಬ ಸುಳಿವು ಅರಿತು ಅವರೆಲ್ಲ ಜಾಗ ಖಾಲಿ ಮಾಡಿದರು.


ಕೊನೆಗೆ ಶಾಸಕ ಟಿ.ಎಸ್.ಶ್ರೀವತ್ಸ ಅವರನ್ನು ಮತ್ತೊಮ್ಮೆ ಕರೆಯಿಸಿಕೊಂಡು ಕಾರ್ಯಕ್ರಮವನ್ನು ಮಧ್ಯಾಹ್ನ 2ಗಂಟೆ ಸುಮಾರಿಗೆ ಉದ್ಘಾಟಿಸಲಾಯಿತು. ಅದ್ದೂರಿಯಾಗಿ ನೆರವೇರಬೇಕಿದ್ದ ಕಾರ್ಯಕ್ರಮ ಬಹಳ ನೀರಸವಾಗಿ ನಡೆದುಹೋಯಿತು. ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪಾ, ಸದಸ್ಯರಾದ ಎಚ್.ಎಂ.ಶಾಂತಕುಮಾರಿ, ಸವಿತಾ ಸುರೇಶ್, ಶೋಭಾ ಸುನಿಲ್, ಮಾ.ವಿ.ರಾಮಪ್ರಸಾದ್, ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಪ್ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net