

ತಿಪಟೂರು : ನಗರದ ಮಾರನಗೆರೆ ಬಳಿ ನಿರ್ಮಿಸಲಾಗುತ್ತಿರುವ ಅಂಡರ್ ಪಾಸ್ ತಡೆಗೋಡೆ ಉದ್ಘಾಟನೆಗೂ ಮುನ್ನವೇ ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ.
ನಗರದ ಬಿ.ಎಚ್.ರಸ್ತೆಯಿಂದ ಮಾರನಗೆರೆ ಬಡಾವಣೆ, ಶಾರದಾನಗರ, ಹಾಸನ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿದ್ದ ಮಾನವ ಚಲಿತ ರೈಲ್ವೆ ಗೇಟಿನ ಅನಾನುಕೂಲತೆಗಳನ್ನು ಮನಗಂಡು, ಸಾರ್ವಜನಿಕರ ಒತ್ತಾಶಯದ ಮೇರೆಗೆ ಅಂದಿನ ರೈಲ್ವೆ ಸಚಿವ ಸುರೇಶ್ ಅಂಗಡಿ ನಿರ್ದೇಶನದಂತೆ ತುರ್ತಾಗಿ ಈ ಭಾಗದಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಕರೊನಾ ಲಾಕ್‌ಡೌನ್, ಇನ್ನಿತರ ಕಾರಣಗಳಿಂದ ಪ್ರಾರಂಭದಲ್ಲಿ ಕಾಮಗಾರಿ ತಡವಾಗಿ ಪ್ರಾರಂಭವಾಯಿತಾದರೂ, ಇಲಾಖಾ ನಿಯಮದಂತೆ ನಿಗದಿತ ಅವಧಿಯಲ್ಲಿ ಮಾನವ ಚಾಲಿತ ರೈಲ್ವೇ ಗೇಟ್ ಮುಚ್ಚಿದ ಪರಿಣಾಮ ಕಾಮಗಾರಿ ವೇಗ ಪಡೆಯಿತು.
ಇದೀಗ ರೈಲ್ವೆ ಗೇಟಿನಿಂದ ಅಂಡರ್ ಪಾಸ್ ಹಾದು ಹೋಗಿರುವ ಹಾದಿಯಲ್ಲಿ 102 ಮೀಟರ್ ಹಾಗೂ 72 ಮೀಟರ್‌ನ ಎರಡು ತಡೆ ಗೋಡೆಗಳನ್ನು ನಿರ್ಮಿಸಲಾಗಿದ್ದು, ರೈಲ್ವೆ ಸೇತುವೆ ಪಕ್ಕದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು, ದಿನದಿಂದ, ದಿನಕ್ಕೆ ಬಿರುಕು ದೊಡ್ಡದಾಗುತ್ತಿದೆ, ಕಳಪೆ ಕಾಮಗಾರಿಯ ಬಗ್ಗೆ ಎಚ್.ಎಸ್. ದೇವರಾಜು ಎಂಬುವವರು ರೈಲ್ವೆ ಮೇಲಾಧಿಕಾರಿಗಳು, ಗುತ್ತಿಗೆದಾರರ ಗಮನಕ್ಕೆ ತಂದು, ತಕ್ಷಣ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವಂತೆ ಕೋರಿದ್ದಾರೆ.
ಸೈಡ್ ವಾಲ್ ನಿರ್ಮಿಸಲಾಗುವುದು: ಆರ್‌ಸಿಸಿ ವಾಲ್‌ಗೆ ರಿಟರ್ನಿಂಗ್ ವಾಲ್ ಸರಿಯಾಗಿ ಜೋಡಣೆಯಾಗಲ್ಲ. ತಡೆಗೋಡೆಯ ಸುರಕ್ಷತೆ ದೃಷ್ಟಿಯಿಂದ ಪ್ರತೀ 15 ಮೀಟರಿಗೊಂದರಂತೆ ಎಕ್ಸ್ಟೆಂಷನ್ ವಾಲ್ ನಿರ್ಮಿಸಲಾಗಿದೆ. ಇದೇ ಬಿರುಕು ಬಿಟ್ಟಿದೆ ಎನ್ನಲಾಗುತ್ತಿದೆ. ಬಿರುಕು ಬಿಟ್ಟಿರುವುದನ್ನು ಸಂಬಂಧಪಟ್ಟ ಇಂಜಿನಿಯರುಗಳು, ಮೈಸೂರಿನ ಮೇಲಾಧಿಕಾರಿಗಳೂ ಗಮನಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಬಿರುಕು ಬಿಟ್ಟಿರುವ ಜಾಗದಲ್ಲಿ ಹೆಚ್ಚುವರಿಯಾಗಿ ಸೈಡ್ ವಾಲ್ ನಿರ್ಮಿಸಲು ಸೂಚಿಸಿದ್ದಾರೆ. ಅದರಂತೆ ಕಾಮಗಾರಿ ಮುಂದುವರಿದಿದೆ. ಮೂರು ದಿನದಲ್ಲಿ ಸೈಡ್ ವಾಲ್ ನಿರ್ಮಿಸಲಾಗುವುದು ಎಂದು ಗುತ್ತಿಗೆದಾರ ರವಿ ತಿಳಿಸಿದ್ದಾರೆ.
ನಿತ್ಯ ನೂರಾರು ರೈಲು ಸಂಚರಿಸುತ್ತವೆ. ಅಕಸ್ಮಾತ್ ಅನಾಹುತ ಸಂಭವಿಸಿದರೆ ಹೊಣೆ ಯಾರು ? ಪರಿಹಾರ ಕೊಡುವವರು ಯಾರು,?. ಈ ಕುರಿತು ಕೇಂದ್ರ ರೈಲ್ವೆ ಮಂತ್ರಿಗಳಿಗೆ ಪತ್ರ ಬರೆದು, ಎಚ್ಚರಿಸುವ ಪ್ರಯತ್ನ ಮಾಡಿದ್ದೇನೆ.
ಎಚ್.ಎಸ್. ದೇವರಾಜು ವೈಷ್ಣವ ಸಮಾಜದ ಗೌರವಾಧ್ಯಕ್ಷ ಹಿಂಡಿಸ್ಕೆರೆ