

ಅರಸೀಕೆರೆ ಗ್ರಾಮಾಂತರ: ಹಾಸನ ಜಿಲ್ಲೆಯ ಗಡಿ ಭಾಗ ಬಾಣಾವರದಲ್ಲಿ 206, 234 ಎರಡು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿವೆ. ಬಾಣಾವಾರದ ಲಿಂಗಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ ಸುಂಕ ವಸೂಲಾತಿ ಕೇಂದ್ರಗಳನ್ನು ನಿರ್ಮಾಣ ಮಾಡಲಾಗಿದೆ. ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಟೋಲ್ ಪ್ಲಾಜಾವನ್ನು ಇನ್ನು ಉದ್ಘಾಟನೆ ಮಾಡಿಲ್ಲ. ಈ ನಡುವೆ ಏಕಾಏಕಿ ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡುತ್ತಿರುವ ಜನಾಕ್ರೋಶಕ್ಕೆ ಕಾರಣವಾಗಿದೆ.
ಜೂ.11ರಿಂದ ಟೋಲ್‌ನಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ. ಇದು ಪ್ರತಿನಿತ್ಯ ಸಂಚರಿಸುವ ವಾಹನ ಸವಾರರಿಗೆ ಹಾಗೂ ಅಕ್ಕಪಕ್ಕದ ಗ್ರಾಮದವರಿಗೆ ಆಶ್ಚರ್ಯವನ್ನುಂಟು ಮಾಡಿದ್ದಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಏಕೆಂದರೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳಬೇಕು. ನಂತರ ಉದ್ಘಾಟನೆಯಾಗಬೇಕು. ಆದರೆ, ಉದ್ಘಾಟನೆಗೂ ಮುನ್ನವೇ ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ತಿಳಿಸದೆ ರಸ್ತೆ ಸುಂಕ ವಸೂಲಿ ಮಾಡುತ್ತಿರುವುದು ಹಗಲು ದರೋಡೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಪರಿಪೂರ್ಣವಾಗದೆ ಟೋಲ್‌ನಲ್ಲಿ ಹಣ ಸಂಗ್ರಹಣೆ ಮಾಡುವುದು ಯಾವ ನ್ಯಾಯ. ಅಷ್ಟೇ ಅಲ್ಲದೇ ಒಂದೊಂದು ಗಂಟೆ ವಾಹನಗಳನ್ನು ನಿಲ್ಲುವ ಪರಿಸ್ಥಿತಿ ಇದೆ. ತುರ್ತು ಪರಿಸ್ಥಿತಿಯಲ್ಲಿರುವ ಪ್ರಯಾಣಿಕರು, ಆ್ಯಂಬುಲೆನ್ಸ್‌ನಲ್ಲಿ ಚಿಕಿತ್ಸೆಗೆ ಹೋಗುವ ರೋಗಿಗಳ ಗತಿ ಏನು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಬಾಣಾವಾರ ಮಾರ್ಗವಾಗಿ ಕಡೂರಿಗೆ ಹೋಗಿ ಮತ್ತೆ ಬರಲು 200 ರೂ. ಗಳ ಟೋಲ್ ಕಟ್ಟಬೇಕಾಗಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಚನ್ನರಾಯಪಟ್ಟಣದ ವಾಹನದ ಮಾಲೀಕ ರವಿ.
ಒಂದು ಟೋಲ್ ಸಂಗ್ರಹ ಕೇಂದ್ರದಿಂದ ಮತ್ತೊಂದು ಟೋಲ್ ಸಂಗ್ರಹ ಕೇಂದ್ರಕ್ಕೆ 60 ಕಿ.ಮೀ. ಅಂತರವಿರಬೇಕು. ಆದರೆ, ಬಾಣಾವಾರ ಹಾಗೂ ಕಡೂರು ನಡುವೆ 38 ಕಿ.ಮೀ. ಅಂತರವಿದೆ. ಒಮ್ಮೆ ಎರಡು ಮಾರ್ಗಗಳಿಗೆ ಹೋಗಿ ಬರಲು ವಾಹನ ಸವಾರರು 200 ರೂ. ಹಣವನ್ನು ತೆತ್ತಬೇಕಾದ ಪರಿಸ್ಥಿತಿ ಎದುರಾಗಿದೆ.
ಸ್ಥಳೀಯರ ಆಕ್ರೋಶ
ಸ್ಥಳೀಯರಿಂದಲೂ ಸುಂಕ ವಸೂಲಿ ಮಾಡುತ್ತಿರುವುದಕ್ಕೆ ಇಲ್ಲಿನ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ನಾವು ನಮ್ಮ ಜಮೀನುಗಳನ್ನು ಕೊಟ್ಟು ರಸ್ತೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೆ ಇವರು ಸ್ಥಳೀಯರಿಗೆ ಏನು ಅನುಕೂಲ ಮಾಡಿದ್ದಾರೆ. ಭೂ ಒತ್ತುವರಿ ವೇಳೆ ಸರ್ಕಾರದಿಂದ ನಮಗೆ ಒಂದು ಗುಂಟೆ ಜಾಗಕ್ಕೆ ಕೇವಲ 5 ಸಾವಿರ ರೂ. ನೀಡಿದ್ದಾರೆ. ನಾವು ನಮ್ಮ ಜಮೀನನ್ನೇ ಕೊಡದಿದ್ದಿದ್ದರೆ ಇವರು ಹೇಗೆ ರಸ್ತೆ ನಿರ್ಮಾಣ ಮಾಡುತ್ತಿದ್ದರು. ನಾವು ನಮ್ಮ ಜಮೀನು ಕೊಟ್ಟು ಈಗ ಇವರಿಗೆ 200 ರೂ. ಗಳನ್ನು ನೀಡಿ ಸಂಚರಿಸುವಂತಹ ಸ್ಥಿತಿ ಬಂದಿದೆ. ಇಲ್ಲಿನ ಗೊಂದಲ ಸರಿಪಡಿಸದಿದ್ದರೆ ಸ್ಥಳೀಯರೆಲ್ಲಾ ಸೇರಿ ರಸ್ತೆ ತಡೆದು ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಮಂಜುನಾಥನ ಕೊಪ್ಪಲಿನ ನಿವಾಸಿ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ರಾಷ್ಟ್ರೀಯ ಹೆದ್ದಾರಿಯ ಉದ್ಘಾಟನೆ ಕೂಡ ಆಗಿಲ್ಲ, ಟೋಲ್ ಕೇಂದ್ರಗಳ ಉದ್ಘಾಟನೆಯೂ ಆಗಿಲ್ಲ. ಹೇಗೆ ಅವರು ಟೋಲ್ ಗಳಲ್ಲಿ ಹಣ ಸಂಗ್ರಹಣೆ ಮಾಡುತ್ತಾರೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸಲಾಗುವುದು.
ಕೆ.ಎಂ. ಶಿವಲಿಂಗೇಗೌಡ ಅರಸೀಕೆರೆ ಶಾಸಕರು