ಉದ್ಘಾಟನೆ ಭಾಗ್ಯ ಕಾಣದ ಪಶು ಆಸ್ಪತ್ರೆ ಕಟ್ಟಡ

YDG 02
Published on

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ

ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆ ಮೂಲಕ ಲಕ್ಷಾಂತರ ರೂ. ಅನುದಾನ ಬಿಡುಗಡೆಗೊಳಿಸುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷೃದಿಂದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂಬುದಕ್ಕೆ ತೆಲಂಗಾಣದ ಗಡಿಗೆ ಹೊಂದಿರುವ ಗುರುಮಠಕಲ್ ತಾಲೂಕಿನ ಈಡ್ಲೂರು ಗ್ರಾಮದ ಪಶು ಆಸ್ಪತ್ರೆ ತಾಜಾ ನಿದರ್ಶನ.

ಮೂಲ ಸೌಕರ್ಯಗಳು ಮರೀಚಿಕೆಯಾಗಿರುವ ಈ ಗ್ರಾಮ ಯಾದಗಿರಿ ಜಿಲ್ಲಾ ಕೇಂದ್ರದಿಂದ 50 ಮತ್ತು ಗುರುಮಠಕಲ್ ತಾಲೂಕು ಕೇಂದ್ರದಿಂದ 30 ಕಿಮೀ. ಅಂತರದಲ್ಲಿದೆ. ಅಲ್ಲದೆ ತೆಲಂಗಾಣದ ಗಡಿಗೆ ಹೊಂದಿಕೊಂಡ ಕಾರಣ ಇಲ್ಲಿಗೆ ಸರ್ಕಾರಿ ಅಧಿಕಾರಿಗಳು ಭೇಟಿ ನೀಡುವುದು ಅಪರೂಪ ಎನ್ನುವಂತಾಗಿದೆ. ಹೀಗಾಗಿ ಗ್ರಾಮಸ್ಥರು ಸಮಸ್ಯೆಗಳ ಸುಳಿಯಲ್ಲಿ ಪ್ರತಿನಿತ್ಯ ಜೀವನ ನಡೆಸುತ್ತಿದ್ದಾರೆ.

ಈಡ್ಲೂರಿನಲ್ಲಿನ ಪಶು ಆಸ್ಪತ್ರೆ ಸಾಕಷ್ಟು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿತ್ತು. ಹೀಗಾಗಿ ಪಶು ಸಂಗೋಪನಾ ಇಲಾಖೆಯಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಳೆದ 3 ವರ್ಷಗಳ ಹಿಂದೆ 22 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಆದರೆ ಗುತ್ತಿಗೆದಾರ ಕಳೆದೊಂದು ವರ್ಷದಿಂದ ಹೊಸ ಬಿಲ್ಡಿಂಗ್ನ್ನು ಅಧಿಕಾರಿಗಳಿಗೆ ಹಸ್ತಾಂತರಗೊಳಿಸದಿರುವುದು ಭಾರಿ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ಗ್ರಾಮದಲ್ಲಿನ ಪಶು ಆಸ್ಪತ್ರೆ ತಾತ್ಕಾಲಿಕವಾಗಿ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ನಡೆಸುತ್ತಿದ್ದು, ಆಸ್ಪತ್ರೆಗೆ ಇಲಾಖೆಯಿಂದ ನೀಡುವ ಪಶುಗಳ ಔಷಧ, ಮಾತ್ರೆ ಇತ್ಯಾದಿಗಳು ಸುರಕ್ಷಿತವಾಗಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಶಾಲಾ ಕಟ್ಟಡದ ಒಳಗಡೆ ಸ್ವಚ್ಛತೆ ಮರೀಚಿಕೆಯಾಗಿದ್ದು, ಎಲ್ಲೆಂದರಲ್ಲಿ ಔಷಧ ಬ್ಯಾಗ್ಗಳನ್ನು ಸೇರಿಸಿಡಲಾಗಿದೆ. ಪಕ್ಕದಲ್ಲೇ ಇರುವ ಹೊಸ ಕಟ್ಟಡದಲ್ಲಿ ಗ್ರಾಮದ ಕೆಲವರು ತಾವು ಬೆಳೆದ ಹತ್ತಿ, ತೊಗರಿ ಮೂಟೆಗಳನ್ನು ದಾಸ್ತಾನು ಮಾಡಿದ್ದು, ಸರ್ಕಾರಿ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ್ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಅಲ್ಲದೆ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಗೂ ಮುನ್ನವೇ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದ್ದು, ಕಾಮಗಾರಿಯಲ್ಲಿ ಕಳಪೆಯಾಗಿರುವುದು ಎದ್ದು ಕಾಣಿಸುತ್ತಿದೆ. ಆಸ್ಪತ್ರೆಯ ಆವರಣದಲ್ಲಿ ಜಾಲಿಗಿಡಗಳು ಯಥೇಚ್ಚವಾಗಿ ಬೆಳೆದ ಪರಿಣಾಮ ಆಗಾಗ ಇಲ್ಲಿ ವಿಷ ಜಂತುಗಳು ದರ್ಶನ ಕೊಡುತ್ತವೆ. ಪರಿಸ್ಥಿತಿ ಹೀಗಿದ್ದರೂ ಇಲಾಖೆ ಅಧಿಕಾರಿಗಳು ತಮ್ಮದೇ ಆಸ್ತಿ ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಜನ.

ಲಕ್ಷಾಂತರ ರೂ. ಖರ್ಚು ಮಾಡಿ ಸುಸಜ್ಜಿತವಾಗಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಆದರೂ ಗುತ್ತಿಗೆದಾರ ತನ್ನ ಬಿಲ್ಲಿನ ಹಣ ಬಾಕಿ ಇರುವ ಕಾರಣ ಇಲಾಖೆ ಹಸ್ತಾಂತರಿಸಲು ಒಪ್ಪುತ್ತಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಿರುವುದು ಅಚ್ಚರಿ ಜತೆ ಅನುಮಾನಕ್ಕೂ ಎಡೆಮಾಡಿಕೊಡುತ್ತಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ, ಸೌಲಭ್ಯ ಇಲ್ಲದ ಕಾರಣ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವುದು ಜರೂರಿ ಎನಿಸಿದೆ.

ಉದ್ಘಾಟನೆಗೊಳ್ಳದ ಪಶು ಆಸ್ಪತ್ರೆ ಆವರಣದಲ್ಲಿ ಕಿಡಿಗೇಡಿಗಳು ಪ್ರತಿನಿತ್ಯ ಸಂಜೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ. ಶಾಲೆ ಮತ್ತು ಆಸ್ಪತ್ರೆ ಆವರಣದಲ್ಲಿ ಕುಡಿದು ಬಿಸಾಡಿದ ಮದ್ಯದ ಬಾಟಲ್ಗಳು, ಇಸ್ಪೀಟ್ ಎಲೆಗಳು ಬಿದ್ದಿದ್ದು, ಇದರಿಂದ ಮಹಿಳೆಯರು ಮತ್ತು ಸಭ್ಯಸ್ಥರು ಆಸ್ಪತ್ರೆಗೆ ಬರಲು ಮುಜುಗರ ಅನುಭವಿಸುತ್ತಿದ್ದಾರೆ. ಸಂಜೆಯಾದರೆ ಸಾಕು ಪಶು ಆಸ್ಪತ್ರೆ ಆವರಣ ಓಪನ್ ಬಾರ್ನಂತೆ ಮಾರ್ಪಡುತ್ತಿರುವುದು ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net