ಉದಯ್ ಭಾಸ್ಕರ್ ವರ್ಗಾವಣೆ: ನೂತನ ಡಿವೈಎಸ್‌ಪಿಯಾಗಿ ಶ್ರೀನಿವಾಸ್ ರಾಜ್ ನೇಮಕ

ಉದಯ್ ಭಾಸ್ಕರ್ ವರ್ಗಾವಣೆ: ನೂತನ ಡಿವೈಎಸ್‌ಪಿಯಾಗಿ ಶ್ರೀನಿವಾಸ್ ರಾಜ್ ನೇಮಕ
Published on

ಹಾಸನ : ಹಾಸನ ಉಪವಿಭಾಗದ ಡಿವೈಎಸ್‌ಪಿ ಜಿ.ವಿ. ಉದಯ್ ಭಾಸ್ಕರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಪ್ರಧಾನ ಕಚೇರಿಗೆ ವರ್ಗಾವಣೆಗೊಳಿಸಲಾಗಿದೆ. ಹಾಗೂ ಸಿಐಡಿ ಡಿವೈಎಸ್‌ಪಿಯಾಗಿದ್ದ ಬಿ.ಎಸ್. ಶ್ರೀನಿವಾಸ್ ರಾಜ್ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಿ ಪೊಲೀಸ್ ಮಹಾನಿರ್ದೇಶಕರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಸಂಬಂಧಪಟ್ಟ ಘಟಕಾಧಿಕಾರಿಗಳು, ಈ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ವರ್ಗಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸುವುದು ಹಾಗೂ ಸದರಿ ಅಧಿಕಾರಿಗಳು ಬಿಡುಗಡೆಗೊಂಡ ಮತ್ತು ವರದಿ ಮಾಡಿಕೊಂಡ ಬಗ್ಗೆ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿ ಆದೇಶ ಮಾಡಲಾಗಿದೆ.

ವರ್ಗಾವಣೆಗೆ ಮನವಿ ಮಾಡಿದ್ದ ಉದಯ್‌ಭಾಸ್ಕರ್

‘ಡಿವೈಎಸ್‌ಪಿ ಉದಯ್ ಭಾಸ್ಕರ್ ಒಂದು ಪಕ್ಷದವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರೌಡಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ರೌಡಿಗಳೇ ಇವರ ನೆರವಿನಿಂದ ಪೊಲೀಸ್ ಠಾಣೆಗಳನ್ನು ನಿಯಂತ್ರಿಸುತ್ತಿದ್ದಾರೆ. ಇವರಿಂದ ನಿಷ್ಪಕ್ಷಪಾತ ಚುನಾವಣೆ ಎದುರು ನೋಡುವುದು ಅಸಾಧ್ಯ. ಹಾಗಾಗಿ ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದಲ್ಲಿ ಎಸ್‌ಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ಶಾಸಕ ಎಚ್.ಡಿ. ರೇವಣ್ಣ ಅವರು ಪದೇಪದೆ ಆರೋಪ ಮಾಡುತ್ತಲೇ ಬರುತ್ತಿದ್ದರು. ಇದರಿಂದ ಅಸಮಾಧಾನಗೊಂಡ ಡಿವೈಎಸ್‌ಪಿ ಉದಯ್ ಭಾಸ್ಕರ್ ಅವರೇ ಚುನಾವಣೆ ಮುಗಿಯುವವರೆಗೂ ತಮ್ಮನ್ನು ಹಾಸನ ಜಿಲ್ಲೆ ಹೊರತುಪಡಿಸಿ ಬೇರೆಡೆಗೆ ತಾತ್ಕಾಲಿಕ ವರ್ಗಾವಣೆ ಮಾಡಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಏ.2ರಂದು ಮನವಿ ಮಾಡಿ ಪತ್ರ ಬರೆದಿದ್ದರು. ಇದೀಗ ಉದಯ್ ಭಾಸ್ಕರ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net