ಉದಯನಿಧಿ ಸ್ಟಾಲಿನ್‌ಗೆ ಗಣೇಶ ಸದ್ಬುದ್ಧಿ ಕೊಡಲಿ

CTD 8 SRI KADASIDSHVAR SRI--02
Published on

ಚಿತ್ರದುರ್ಗ: ಸನಾತನ ಧರ್ಮದ ವಿರುದ್ಧ ಮಾತನಾಡುತ್ತಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರಿಗೆ ದುರ್ಗದಲ್ಲಿ ನಡೆಯುತ್ತಿರುವ ಗಣೇಶನ ಶೋಭಾಯಾತ್ರೆಯನ್ನು ತೋರಿಸಬೇಕಿದೆ ಎಂದು ಕೊಲ್ಲಾಪುರ ಕನ್ಯೇರಿ ಮಠದ ಶ್ರೀ ಕಾಡ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಶೋಭಾಯಾತ್ರೆಗೆ ಭಾನುವಾರ ಚಾಲನೆ ನೀಡಿದ ಶ್ರೀಗಳು, ಉದಯನಿಧಿ ಸನಾತನ ಹಿಂದು ಧರ್ಮದ ವಿರುದ್ಧ ಮಾತನಾಡುತ್ತಿದ್ದಾರೆ. ಆತನ ಅಜ್ಜ ಪೆರಿಯಾರ್‌ರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ದೇಶದಲ್ಲಿ 90 ಕೋಟಿಗೂ ಅಧಿಕ ಹಿಂದುಗಳಿದ್ದಾರೆ ಎಂದರು.
ಸನಾತನ ಹಿಂದು ಧರ್ಮವು ಪ್ರತಿಯೊಬ್ಬರು ತಮಗೆ ಬೇಕಾದ ಹಾಗೆ ದೇವರನ್ನು ಪೂಜಿಸುವ ಸ್ವಾತಂತ್ರೃ ಕೊಟ್ಟಿದೆ. ಹಿಂದು ಧರ್ಮ ಎಲ್ಲರನ್ನೂ ಜತೆಗೆ ಕರೆದು ಕೊಂಡು ಹೋಗುತ್ತದೆ. ಅನ್ಯಧರ್ಮಗಳನ್ನು ಗೌರವಿಸುತ್ತದೆ ಎಂದು ಹೇಳಿದರು.
ನಮ್ಮದು ಅತಿರೇಕದ ಧರ್ಮವಲ್ಲ. ಪಂಥ, ಜಾತಿ ನಿರಪೇಕ್ಷತೆ ಆಂತರಿಕವಾಗಿದೆ, ಅದನ್ನು ಪ್ರತ್ಯೇಕವಾಗಿ ಕಲಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್‌ನಿಂದ ಅಸ್ಸಾಂವರೆಗೆ ಗಣೇಶನನ್ನು ಆರಾಧಿಸಲಾಗುತ್ತದೆ. ಅನ್ಯ ಧರ್ಮಿಯರೂ ಪೂಜಿಸುತ್ತಾರೆ. ಆದರೆ, ಆಚರಣೆಯಲ್ಲೇ ದೋಷ ಹುಡುಕುವ ನಮ್ಮ ಮೂರ್ಖರನ್ನು ಸಹಿಸಿಕೊಳ್ಳಬೇಕಿದೆ. ಯಾವುದೇ ಕೊರತೆ ಇಲ್ಲದ ನಮ್ಮ ಧರ್ಮವನ್ನು ಟೀಕಿಸುವಂಥವರಿಗೆ ಗಣೇಶ ಸದ್ಬುದ್ಧಿ ಕೊಡಲಿ ಎಂದರು.
ಗಣೇಶೋತ್ಸವ ಮಹಾರಾಷ್ಟ್ರದಿಂದ ಆರಂಭವಾಯಿತು. ಅಲ್ಲಿಯ ಉತ್ಸವಗಳನ್ನು ಮೀರಿಸುವಂತೆ ಚಿತ್ರದುರ್ಗದಲ್ಲಿ ಶೋಭಾಯಾತ್ರೆ ನಡೆದಿದೆ. ಈ ಉತ್ಸವ ನೋಡಿದರೆ ಯಾರ‌್ಯಾರು ಹಿಂದು ಧರ್ಮದಿಂದ ಅಲುಗಾಡಲು ಆರಂಭವಾಗಿದ್ದಾರೋ ಅವರು ಮೂಲ ಸ್ಥಾನಕ್ಕೆ ಹಿಂತಿರುಗುತ್ತಾರೆ ಎಂದು ತಿಳಿಸಿದರು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಎಂ. ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ತಹಸೀಲ್ದಾರ್ ಡಾ.ನಾಗವೇಣಿ, ವಿಎಚ್‌ಪಿ ಜಿಲ್ಲಾ ಗೌರವಾಧ್ಯಕ್ಷ ಷಡಕ್ಷರಪ್ಪ ಕೊಂಡ್ಲಹಳ್ಳಿ, ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಶರಣ್‌ಕುಮಾರ್, ಪ್ರಭಂಜನ್, ಬದ್ರಿನಾಥ್, ರುದ್ರೇಶ್, ಅಶೋಕ್, ರಾಜೇಶ್, ಭಾನು, ಸಂದೀಪ್, ಶ್ರೀನಿವಾಸ್, ರೋಹಿತ್, ರಂಗಸ್ವಾಮಿ, ಟೈಗರ್ ತಿಪ್ಪೇಸ್ವಾಮಿ, ಪ್ರಶಾಂತ್, ತಿಪ್ಪೇಸ್ವಾಮಿ, ವಿಕ್ರಂ ಜೈನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net