

ದಾವಣಗೆರೆ: ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಪ್ರತಿಭಟನಾಕಾರರು ಉದಯನಿಧಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಧಿಕ್ಕಾರ ಕೂಗಿದರು.
ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಮಾಜಿ ಮೇಯರ್ ಎಸ್.ಟಿ.ವೀರೇಶ್, ಸನಾತನ ಧರ್ಮದ ವಿಚಾರ ದೇಶಕ್ಕೆ ಸೀಮಿತವಾಗಿಲ್ಲ. ಹಿಂದು ಧರ್ಮವನ್ನು ಸರ್ವನಾಶ ಮಾಡಲು ವ್ಯಾಟಿಕಲ್ ಸಿಟಿಯಿಂದ ಪಿತೂರಿ ನಡೆಯುತ್ತಿದೆ ಎಂದು ಹೇಳಿದರು.
ರಾಜಕೀಯ ಅಸ್ತಿತ್ವಕ್ಕಾಗಿ ಇಂಡಿಯಾ ಹೆಸರಿನ ಒಕ್ಕೂಟದ ಕುತಂತ್ರ ಇದಾಗಿದೆ. ಇದರ ಹಿಂದೆ, ಭಾರತವನ್ನು ಹಿಂದುಮುಕ್ತ ಮಾಡಿ ಕ್ರೈಸ್ತ ರಾಷ್ಟ್ರ ಮಾಡುವ ಪಿತೂರಿ ನಡೆದಿದೆ. ಸ್ಟಾಲಿನ್ ಹೇಳಿಕೆ ಕುರಿತು ಕಾಂಗ್ರೆಸ್ ಮುಖಂಡರು ತಮ್ಮ ನಿಲುವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಇಂತಹ ವಿಚಾರಗಳಲ್ಲಿ ಢೋಂಗಿ ಜಾತ್ಯತೀತವಾದಿಗಳು ಸುಮ್ಮನೆ ಇರುತ್ತಾರೆ. ಆದರೆ ಹಿಂದು ಸಂಘಟನೆಯ ಕಾರ್ಯಕರ್ತರು ಮಾತನಾಡಿದರೆ ಅದನ್ನು ದೊಡ್ಡದು ಮಾಡುತ್ತಾರೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಸನಾತನ ಧರ್ಮ- ಸಂಸ್ಕೃತಿಯ ಅಂತ್ಯವಾಗಬೇಕೆಂದು ಹೇಳಿರುವ ಸ್ಟಾಲಿನ್ ಹೇಳಿಕೆಯನ್ನು ಎಲ್ಲರೂ ಖಂಡಿಸಬೇಕೆಂದು ಆಗ್ರಹಿಸಿದರು.
ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ಸನಾತನ ಧರ್ಮವನ್ನು ಉದಯನಿಧಿ ಸ್ಟಾಲಿನ್ ಅವರ ತಾತ ಕರುಣಾನಿಧಿ ಅವರಿಂದಲೇ ನಾಶ ಮಾಡಲು ಸಾಧ್ಯವಾಗಿಲ್ಲ. ಇಂತಹ ನೂರಾರು ಜನ ಬಂರೂ ಸನಾತನ ಧರ್ಮದ ನಾಶ ಅಸಾಧ್ಯ. ಹಿಂದುಗಳು ಜಾಗೃತರಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ,ಪಾಲಿಕೆ ಸದಸ್ಯರಾದ ಕೆ. ಪ್ರಸನ್ನ ಕುಮಾರ್, ಆರ್.ಎಲ್.ಶಿವಪ್ರಕಾಶ್, ಚನ್ನಗಿರಿ ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್, ಎಲ್.ಎನ್.ಕಲ್ಲೇಶ್, ಸಚಿನ್ ವೆರ್ಣೇಕರ್, ಎಚ್.ಪಿ.ವಿಶ್ವಾಸ್ ಇತರರಿದ್ದರು.