ಉತ್ಸಾಹದಿಂದ ಪಾಲ್ಗೊಂಡ ಮಕ್ಕಳು

Rotari
Published on

ಬೀದರ್: ರೋಟರಿ ಕ್ಲಬ್ ಆಪ್ ಬೀದರ್ ನಿಂದ ಭಾನುವಾರ ನಗರದಲ್ಲಿ ಪ್ರೌಢ ಶಾಲೆ ವಿದ್ಯಾರ್ಥಗಳಿಗಾಗಿ ಸೈಕಲ್ ರೇಸ್ ಸ್ಪರ್ಧೆ ನಡೆಯಿತು. ವಿವಿಧೆಡೆಯ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಗರದ ಬಸ್ ನಿಲ್ದಾಣ ಪಕ್ಕದ ಶಿವಸಾಯಿ ಬಜಾರ್ ಹತ್ತಿರದಿಂದ ಸ್ಫರ್ಧೆ ಆರಂಭವಾಗಿ, ನೌಬಾದ್ ಬಸವೇಶ್ವರ ವೃತ್ತಕ್ಕೆ ತೆರಳಿ ಪುನಃ ಶಿವಸಾಯಿ ಬಜಾರ್ ವರೆಗೆ ನಡೆಯಿತು. 10 ಕಿಮೀ ಓಟದ ಸ್ಪರ್ಧೆಯಲ್ಲಿ ಉತ್ಸಾಹದಿಂದ ಮಕ್ಕಳು ಪಾಲ್ಗೊಂಡಿದ್ದರು.

ಕ್ಯಾಂಬ್ರಿಜ್ ಸ್ಕೂಲ್ ವಿದ್ಯಾರ್ಥಿ ಮಹ್ಮದ್ ಶಾಹೀದ್ ಖಾನ್ (20.15 ನಿಮಿಷ) ಪ್ರಥಮ, ಅರುಣೋದಯ ಶಾಲೆಯ ಅಮರ ನಾಗಣ್ಣ (20.21 ನಿಮಿಷ) ದ್ವಿತೀಯ ಹಾಗೂ ವಿದ್ಯಾರಣ್ಯ ಶಾಲೆಯ ಪವನ ರಾಜಕುಮಾರ (20.22 ನಿಮಿಷ) ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಬಹುಮಾನ ಎಂಟಿಬಿ ಸೈಕಲ್, ದ್ವಿತೀಯ ಬಹುಮಾನ 2100 ರೂ., ತೃತೀಯ ಬಹುಮಾನ 1100 ರೂ. ನಗದು ಹಾಗೂ ಟ್ರೋಫಿ, ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ ಬಹುಮಾನ ವಿತರಿಸಿ ಮಾತನಾಡಿ, ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ಯುವಕರು ಸ್ವಾಮಿ ವಿವೇಕಾನಂದರ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡು ಶ್ರೇಷ್ಠ ಸಾಧನೆ ಮಾಡಬೇಕು. ಪರಿಸರ ರಕ್ಷಣೆ, ವೈಯಕ್ತಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೈಕಲ್ ಬಳಕೆ ಹೆಚ್ಚುವ ಅಗತ್ಯವಿದೆ ಎಂದರು.

ಅಪರ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಮಾತನಾಡಿದರು. ಗ್ಲೋಬಲ್ ಸೈನಿಕ್ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರ, ಪ್ರಮುಖರಾದ ಡಾ.ಜಗದೀಶ್ ಪಾಟೀಲ್ ಮರೂರ, ರಂಜೀತ ಪಾಟೀಲ್, ಸೂರ್ಯಕಾಂತ ರಾಮಶೆಟ್ಟಿ, ಡಾ. ಕಪೀಲ್ ಪಾಟೀಲ್, ರವಿ ಮೂಲಗೆ, ಗೋಪಾಲ ಲೋಹಿಯಾ, ಡಾ.ವಸಂತ ಪಾಟೀಲ್, ಕಾಶಿನಾಥ ಪಾಟೀಲ್, ಶಿವಶರಣಪ್ಪ ಚಿಟ್ಟಾ, ಡಾ.ವಿ.ವಿ.ಗುತ್ತಿ, ಡಾ.ವಿನೋದ ಸಾವಳಗಿ, ವಿಲಾಸರಾವ ಮೋರೆ, ಕೆ.ಸಿ.ಸೇನನ್, ಡಾ.ವಿದ್ಯಾಸಾಗರ ಕಾಮತಿಕರ್, ಡಾ.ಸುಭಾಷ ಕರ್ಪೂರ, ಸೋಮಶೇಖರ ಪಾಟೀಲ್, ಚಂದ್ರಕಾಂತ ಕಾಡಾದಿ, ದಾದಾರಾವ ಕೋಳೆಕರ್ ಇತರರಿದ್ದರು. ರೋಟರಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿವಶಂಕರ ಕಾಮಶೆಟ್ಟಿ ನಿರೂಪಣೆ ಮಾಡಿದರು. ಪ್ರಕಾಶ ಟೊಣ್ಣೆ ವಂದಿಸಿದರು.

ವಿದ್ಯಾರ್ಥಿನಿಯರಿಗೆ ವಿಜಯವಾಣಿ ಪುರಸ್ಕಾರ
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ವಿಜಯವಾಣಿ ಜಿಲ್ಲಾ ಹಿರಿಯ ವರದಿಗಾರ ಸದಾನಂದ ಜೋಶಿ, ರೋಟರಿ ಸಂಸ್ಥೆಯಿಂದ ಬರುವ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ಸೈಕಲ್ ರೇಸ್ ಸ್ಪರ್ಧೆ ಆಯೋಜಿಸಿದರೆ ಪ್ರಥಮ ಸ್ಥಾನ ಪಡೆಯುವವರಿಗೆ ವಿಜಯವಾಣಿ ನಗದು ಪುರಸ್ಕಾರ ಎಂದು 5001 ರೂ. ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ವಿಜೇತರಿಗೆ ಕ್ರೀಡಾ ಇಲಾಖೆಯಿಂದ 10 ಸಾವಿರ ರೂ. ಬಹುಮಾನ ಕೊಡುವುದಾಗಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ.ನಾಡಗೇರ್ ಹೇಳಿದರು. ವಿದ್ಯಾರ್ಥಿನಿಯರಿಗೆ ಉತ್ತೇಜನ ನೀಡಲು ವಿಜೇತರಿಗೆ ಒಂದು ಸೈಕಲ್ ಬಹುಮಾನ ನೀಡುವುದಾಗಿ ಹಿರಿಯ ರೊಟೇರಿಯನ್ ಸವರಾಜ ಧನ್ನೂರ್ ಅವರು ಪ್ರಕಟಿಸಿದರು.

ಎಲ್ಲರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಸೈಕಲ್ ರೇಸ್ ಸ್ಪರ್ಧೆ ಆಯೋಜಿಸಿ ಯಶಸ್ವಿಗೊಳಿಸಲಾಗಿದೆ. ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಖುಷಿ ತಂದಿದೆ. ಒಂದು ತಿಂಗಳ ಒಳಗೆ ವಿದ್ಯಾರ್ಥಿನಿಯರಿಗಾಗಿ ಸಹ ಸೈಕಲ್ ರೇಸ್ ಸ್ಪರ್ಧೆ ಆಯೋಜಿಸಲಾಗುವುದು.| ಹಾವಶೆಟ್ಟಿ ಪಾಟೀಲ್ರೋಟರಿ ಕ್ಲಬ್ ಆಫ್ ಬೀದರ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net