ಉತ್ಸಾಹದ ಚಿಲುವೆಯಾಗಲಿ ಪಠ್ಯದ ಬೋಧನೆ: ವಿಶ್ರಾಂತ ಕುಲಪತಿ ಡಾ.ಸಬಿಹಾಭೂಮಿಗೌಡ

mysore
Published on

ಮೈಸೂರು: ಪಠ್ಯಕ್ರಮವನ್ನು ನಿಮಿತ್ತವಾಗಿಟ್ಟುಕೊಂಡು ಪಠ್ಯದ ಮೂಲಕ ನಮ್ಮ ಸುತ್ತಮುತ್ತಲಿನ ಸಂಗತಿಗಳನ್ನು ಮಕ್ಕಳಿಗೆ ತಲುಪಿಸಿದರೆ ಮಾತ್ರ ತರಗತಿ ಯಾಂತ್ರಿಕವಾಗಲ್ಲ. ಅದೊಂದು ಉತ್ಸಾಹದ ಚಿಲುಮೆಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಬಿಹಾಭೂಮಿಗೌಡ ಹೇಳಿದರು.

ನಗರದ ಶಾರದ ವಿಲಾಸ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ‘ವರ್ತಮಾನದ ಕನ್ನಡ ಸಾಹಿತ್ಯ: ಪ್ರತಿಸ್ಪಂದನೆಗಳು’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪಠ್ಯದ ಮೂಲಕ ತಿಳಿದುಕೊಂಡಿರುವ ಲೇಖಕ, ಲೇಖಕಿಯರ ಹೆಸರುಗಳನ್ನು ಮಕ್ಕಳು ಯಾವುದೋ ಒಂದು ಕೃತಿಗಳ ಭಾಗಗಳಾಗಿ ನೆನಪಿಸಿಕೊಳ್ಳುತ್ತಾರೆ ಹೊರತು ಅದರ ಆಚೆಗಿನ ಹೆಸರುಗಳನ್ನಾಗಲಿ, ಪಠ್ಯಗಳನ್ನಾಗಲಿ ಹಾಗೂ ಸಾಹಿತ್ಯವನ್ನಾಗಲಿ ಗುರುತಿಸುತ್ತಿಲ್ಲ. ಇದನ್ನು ಎಳೆಯರಲ್ಲಿ ಅರಿವು ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಕ್ಷಕರು ಪಠ್ಯವನ್ನು ಇಟ್ಟುಕೊಂಡು ಪಾಠ ಮಾಡುವುದನ್ನು ಬಿಟ್ಟಾಗ ಮಾತ್ರ ಮಕ್ಕಳು ಅಲ್ಪತೃಪ್ತಿಯಿಂದ ಆಚೆ ಬಂದು ಪೂರ್ಣತೃಪ್ತರಾಗುತ್ತಾರೆ. ಪಠ್ಯಗಳ ಮೂಲಕ ಕನ್ನಡ ಸಾಹಿತ್ಯವನ್ನು ಓದುವ ಸಂಸ್ಕೃತಿ ಹೆಚ್ಚಾಗಿದೆ. ಇದರಿಂದ ಆಚೆ ಬಂದು ವಿಸ್ತರಣೆ ಕಾಣಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಬದಲಾಗುತ್ತಿರುವ ಕಾಲದಲ್ಲಿ ಹಾಗೂ ತಂತ್ರಜ್ಞಾನದ ಮುಂದೆ ಕನ್ನಡವೂ ಸಹ ಬದಲಾಗುತ್ತಿದ್ದು, ಹೆಮ್ಮರವಾಗಿ ಬೆಳೆದಿರುವ ಕನ್ನಡವನ್ನು ಉಳಿಸಬೇಕಾದ ಮನೋಭಾವವನ್ನು ಕನ್ನಡಿಗರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಲು ನಿರಾಸಕ್ತಿ ತೋರುತ್ತಿದ್ದಾರೆ. ನಮ್ಮ ಅಸ್ಮಿತೆಯೇ ಕನ್ನಡ. ಕನ್ನಡದ ನೆಲ ಜಲ-ಭಾಷೆಗಾಗಿ ಹೆಚ್ಚು ಒತ್ತು ಕೊಡಬೇಕು ಎಂದರು.

ಭಾಷೆ ಚೆನ್ನಾಗಿದ್ದರೆ, ಸ್ಪಷ್ಟತೆ ಇದ್ದರೆ ಬೇರೆ ಭಾಷೆಗಳೂ ಅರ್ಥವಾಗುತ್ತದೆ. ಹೀಗಾಗಿ, ಮಾತೃಭಾಷೆಗಳನ್ನು ಸ್ಪಷ್ಟವಾಗಿ ಕಲಿಯಬೇಕು. ಕುವೆಂಪು ಅವರು ಹಿಂದೆಯೇ ನಮ್ಮ ಶಿಕ್ಷಣ ಅನ್ನದ ಶಿಕ್ಷಣ ಆಗಬಾರದು. ಅದು ಜ್ಞಾನದ ಶಿಕ್ಷಣವಾಗಬೇಕು ಎಂದಿದ್ದರು. ಹೀಗಾಗಿ ಮಾತೃಭಾಷೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಶಾರದ ವಿಲಾಸ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್.ದಿನೇಶ್, ಶಾರದಾ ವಿಲಾಸ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ದೇವಿಕಾ, ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಿರಿಯ ಸದಸ್ಯ ಪ್ರೊ.ಟಿ.ಕೆ.ಉಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net