ಉತ್ಸಾಹ ತುಂಬಿದ ಹಾಫ್ ಮ್ಯಾರಥಾನ್

h20-Marathon 6
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಬೆಳಗಿನ ಚಳಿ ಲೆಕ್ಕಿಸದೆ ಹಾಫ್ ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದ ಎಲ್ಲ ವಯೋಮಾನದವರಲ್ಲಿ ಸಾಹಸ ಮತ್ತು ಉತ್ಸಾಹ ಕಂಡು ಬಂದಿತು.

ಹುಬ್ಬಳ್ಳಿ ಫಿಟ್ನೆಸ್ ಕ್ಲಬ್ (ಎಚ್​ಎಫ್​ಸಿ) ಹಾಗೂ ವಿಆರ್​ಎಲ್ ಸಹಯೋಗದಲ್ಲಿ ಗೋಕುಲ ರಸ್ತೆಯ ಕೆಎಲ್​ಇ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಿಂದ 21.1ಕಿ.ಮೀ., 10ಕಿ.ಮೀ., 5 ಕಿ.ಮೀ. ಅಂತರದ ಹಾಫ್ ಮ್ಯಾರಥಾನ್ ಸ್ಪರ್ಧೆಗಳು ಭಾನುವಾರ ನಡೆದವು.

ವಿಆರ್​ಎಲ್ ಲಾಜಿಸ್ಟಿಕ್ಸ್ ಕಂಪನಿ ಸೆಕ್ರೆಟರಿ ಅನಿರುದ್ಧ ಫಡ್ನವಿಸ್, ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಡಾ. ಗುರುರಾಜ ದೇಶಪಾಂಡೆ, ಹುಬ್ಬಳ್ಳಿ ಫಿಟ್ನೆಸ್ ಕ್ಲಬ್ ಅಧ್ಯಕ್ಷ ಡಾ. ಎಸ್.ಪಿ. ಬಳಿಗಾರ, ಸಂಸ್ಥಾಪಕ ಸದಸ್ಯ ಡಾ. ಜಿ.ಸಿ. ಪಾಟೀಲ, ಹಾಫ್ ಮ್ಯಾರಥಾನ್​ಗೆ ಚಾಲನೆ ನೀಡಿದರು.

ವಯೋಮಿತಿಗನುಗುಣವಾಗಿ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಲೇಜ್ ಆವರಣದಿಂದ ಗೋಕುಲ ರಸ್ತೆಯ ಮಾರ್ಗವಾಗಿ ನಡೆದ ಓಟದಲ್ಲಿ ಅತ್ಯುತ್ಸಾಹದಿಂದ ಜನರು ಪಾಲ್ಗೊಂಡಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಹಾಫ್ ಮ್ಯಾರಥಾನ್ ನಡೆದಿರಲಿಲ್ಲ. 8ನೇ ಆವೃತ್ತಿಯ ಈ ಬಾರಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು ಹಾಫ್ ಮ್ಯಾರಥಾನ್​ನ ಮಹತ್ವ ಹೆಚ್ಚಿಸಿತು.

ದಾರಿಯುದ್ದಕ್ಕೂ ಓಟಗಾರರಿಗೆ ಪ್ರೋತ್ಸಾಹ ತುಂಬಲಾಗುತ್ತಿತ್ತು. ಜಾಂಜ್ ಮೇಳದವರು ಓಟಗಾರರಿಗೆ ಉತ್ಸಾಹ ತುಂಬಿದರು. ಸ್ಪರ್ಧೆಯ ಆರಂಭ ಮತ್ತು ಅಂತ್ಯ ಕೆಎಲ್​ಇ ಐಟಿ ಕಾಲೇಜ್ ಆವರಣವಾಗಿತ್ತು. ಹಾಫ್ ಮ್ಯಾರಥಾನ್ ಸ್ಪರ್ಧಿಗಳು ಗೋಕುಲ ರಸ್ತೆ-ತಾರಿಹಾಳ ಬೈಪಾಸ್ ಮಾರ್ಗವಾಗಿ ಗಾಮನಗಟ್ಟಿಯವರೆಗೆ ಓಡಿ ವಾಪಸ್ ಬಂದರು. 10 ಕಿ.ಮೀ. ಸ್ಪರ್ಧಿಗಳು ತಾರಿಹಾಳ ಬೈಪಾಸ್​ವರೆಗೆ ಹಾಗೂ 5 ಕಿ.ಮೀ. ಸ್ಪರ್ಧಿಗಳು ಗೋಕುಲ ರಸ್ತೆಯ ಇನ್ಪೋಸಿಸ್ ಕಚೇರಿವರೆಗೆ ಓಡಿ ಯೂ ಟರ್ನ್ ಪಡೆದರು. ಒಂದಿಷ್ಟು ಸ್ಪರ್ಧಿಗಳಿಗೆ ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ. ಬಹುತೇಕ ಸ್ಪರ್ಧಿಗಳಿಗೆ ತಾನು ಓಡಿದ್ದೇನೆ ಎಂಬ ಖುಷಿ. ಮ್ಯಾರಥಾನ್ ಬಗ್ಗೆ ಅಪರಿಮಿತ ಆಸಕ್ತಿ ಅನಾವರಣಗೊಂಡಿತ್ತು.

ಸ್ಪರ್ಧಿಗಳಿಗೆ ಮಾರ್ಗ ಮಧ್ಯದಲ್ಲಿ ಕುಡಿಯುವ ನೀರು, ಬಾಳೆಹಣ್ಣು, ಶೇಂಗಾ ಚಿಕ್ಕಿ ವ್ಯವಸ್ಥೆ ಮಾಡಲಾಗಿತ್ತು. ಆಂಬುಲೆನ್ಸ್, ಸೈಕಲ್ ಅಸಿಸ್ಟಂಟ್, ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ಹಾಫ್ ಮ್ಯಾರಥಾನ್ ಆರಂಭಕ್ಕೆ ಮುನ್ನ ಡಿಜೆ ಸೌಂಡ್​ಗೆ ಬಹಳಷ್ಟು ಜನರು ನೃತ್ಯ ಮಾಡಿದರು. ಯಕ್ಷಗಾನ ಮೇಳವು ‘ಕಾಂತಾರ’ ಚಲನಚಿತ್ರದ ಹಾಡೊಂದಕ್ಕೆ ನೃತ್ಯ ಮಾಡಿದಾಗ ನೆರೆದವರು ಜಯಘೊಷ ಮೊಳಗಿಸಿದರು. ಡೊಳ್ಳು ಕುಣಿತ, ಗೊಂಬೆ ಕುಣಿತ, ಮಲ್ಲಕಂಬ ಆಕರ್ಷಣೆ ನೀಡಿದವು. ಡಾ. ಅರ್ಪಿತಾ ನಾಡಗೌಡ, ಡಾ. ವಿಜೇತ ಹಳಪೇಟ ನಿರೂಪಿಸಿದ್ದಲ್ಲದೆ, ಭಾಗವಹಿಸಿದ್ದ ಸ್ಪರ್ಧಿಗಳಿಗೆ ಹುರುಪು ಮೂಡಿಸಿದರು. ಉದ್ಯಮಿಗಳಾದ ನಿಖಿತ್ ಸಿಖಾನಿಯಾ, ವಿಶ್ವನಾಥ ಸೋಮಾಪುರ, ಆರ್​ಜೆ ಅಂಕಿತಾ, ಆರ್​ಜೆ ಶಾರುಖ್ ಇತರರು ಇದ್ದರು.

ಓಡಿ ಬಹುಮಾನ ಪಡೆದವರು
21 ಕಿ.ಮೀ. (18ರಿಂದ 34 ವಯೋಮಾನ)

ಪುರುಷರು: ಅನಿಲ ಕುಮಾರ 1ಗಂಟೆ 08 ನಿಮಿಷ(ಪ್ರಥಮ), ಸುಶಾಂತ ಜಧೆ 1ಗಂಟೆ 09 ನಿಮಿಷ (ದ್ವಿತೀಯ), ನವೀನ ಪಾಟೀಲ 1ಗಂಟೆ 10 ನಿಮಿಷ(ತೃತೀಯ)

ಮಹಿಳೆಯರು: ಪ್ರೀನು ಯಾದವ 1ಗಂಟೆ 26 ನಿಮಿಷ (ಪ್ರಥಮ), ಅರ್ಚನಾ ಕೆ.ಎಂ. 1ಗಂಟೆ 26 ನಿಮಿಷ (ದ್ವಿತೀಯ), ಪೂರ್ವ ರೇಡ್ಕರ್ 2ಗಂಟೆ 32 ನಿಮಿಷ(ತೃತೀಯ)

35ರಿಂದ 44 ವಯೋಮಾನ: ಪರಶುರಾಮ ಬೋಯಿ 1ಗಂಟೆ 14 ನಿಮಿಷ, ದೀಪಿಕಾ ಪ್ರಕಾಶ 1ಗಂಟೆ 47 ನಿಮಿಷ

45ರಿಂದ 59 ವಯೋಮಾನ: ಅಶ್ವಿನ್ ಆಚಾರ್ಯ 1ಗಂಟೆ 25 ನಿಮಿಷ, ಪ್ರಿತಿವಾ ಸಿಲ್ವಾ ಲೊಬೊ 2ಗಂಟೆ 03ನಿಮಿಷ

60 ವರ್ಷ ಮೇಲ್ಪಟ್ಟವರು: ಪಾಂಡುರಂಗ ಚೌಗಲೆ 1ಗಂಟೆ 33 ನಿಮಿಷ

----------------

5 ಕಿ.ಮೀ. ( 12ರಿಂದ 14 ವಯೋಮಾನ)

ಗೌರಿ ಶಿಂಗಡೆ 21 ನಿಮಿಷ, ಅನಿಲ ಜಾಧವ 17 ನಿಮಿಷ

15ರಿಂದ 17 ವಯೋಮಾನ: ಚಿಂತನ ಎಚ್.ವಿ. 17 ನಿಮಿಷ, ಸನಿಕಾ ನಲವಡೆ 21 ನಿಮಿಷ

18 ವರ್ಷ ಮೇಲ್ಪಟ್ಟವರು: ಸುನಿಲ್ ಎನ್.ಡಿ. 16 ನಿಮಿಷ, ರೋಹಿಣಿ ಪಾಟೀಲ 19 ನಿಮಿಷ

------------------

10 ಕಿ.ಮೀ. 18ರಿಂದ 34 ವಯೋಮಾನ: ವಿವೇಕ ಮೋರೆ 31 ನಿಮಿಷ, ಪ್ರಜಕ್ತಾ ಶಿಂಧೆ 38 ನಿಮಿಷ

35ರಿಂದ 44 ವರ್ಷ: ಸುನೀಲ ಶಿವನೆ 37 ನಿಮಿಷ, ವಿದ್ಯಾ ಸುರೇಬಾನ 1ಗಂಟೆ 08 ನಿಮಿಷ

45ರಿಂದ 59 ವರ್ಷ: ಶಿವಲಿಂಗಪ್ಪ ಗುಟಗಿ 39 ನಿಮಿಷ, ಸವಿತಾ ಶಾಸ್ತ್ರಿ 1ಗಂಟೆ 02 ನಿಮಿಷ

60 ವರ್ಷ ಮೇಲ್ಪಟ್ಟವರು: ಲಕ್ಷ್ಮೀನಾರಾಯಣನ್ ಎಸ್.ಟಿ. 49 ನಿಮಿಷ, ಭವಾನಿ ಭಂಡಾರಿ 1ಗಂಟೆ 44 ನಿಮಿಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net