

ಲಕ್ಷ್ಮೇಶ್ವರ: ದೇವಾಲಯಗಳು ನಾಡಿನ ಸಾಂಸ್ಕೃತಿಕ ಹಿರಿಮೆಗೆ ಕಿರೀಟಪ್ರಾಯವಾಗಿವೆ. ಪ್ರಾಚೀನ ದೇವಸ್ಥಾನಗಳಲ್ಲಿ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ಕಲಾತ್ಮಕ ಕಾರ್ಯಕ್ರಮ ಸಂಘಟಿಸುವುದರಿಂದ ನಮ್ಮ ಸಾಂಸ್ಕೃತಿಕ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಾಧ್ಯವಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ ಹೇಳಿದರು.
ಇನ್ಪೋಸಿಸ್ ಪ್ರತಿಷ್ಠಾನದಿಂದ ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಪುಲಿಗೆರೆ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತೀಯ ವಿದ್ಯಾಭವನದ ಗೌರವ ಕಾರ್ಯದರ್ಶಿ ಮಾನಂದಿ ಸುರೇಶ ಮಾತನಾಡಿ, ಪುಲಿಗೆರೆ ಉತ್ಸವ ನಿರಂತರವಾಗಿ ನಡೆಯಲು ಸ್ಥಳೀಯರ ಸಹಕಾರ-ಪಾಲ್ಗೊಳ್ಳುವಿಕೆ ಅತ್ಯಗತ್ಯ ಎಂದರು.
ಸೋಮೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ನ ಆಡಳಿತ ಮಂಡಳಿಯವರು ಟಿ.ಕೆ. ಅನಿಲಕುಮಾರ ಅವರಿಗೆ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಬೇಕು ಎಂಬ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಇನ್ಪೋಸಿಸ್ ಅಧಿಕಾರಿ ರಿಷಿ ಬಸು, ಬಸವರಾಜ ಬಳ್ಳಾರಿ, ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ನ ಅಧ್ಯಕ್ಷ ಶಿವಣ್ಣ ನೆಲವಗಿ, ಚಂಬಣ್ಣ ಬಾಳಿಕಾಯಿ, ಡಾ. ವೈ.ಎಫ್. ಹಂಜಿ, ವಿಜಯಣ್ಣ ಮಹಾಂತಶೆಟ್ಟರ್, ವಿ.ಎಲ್. ಪೂಜಾರ, ಶಿವಣ್ಣ ಕೋಳಿವಾಡ, ಮಲ್ಲಿಕಾರ್ಜುನ ಮಹಾಂತಶೆಟ್ಟರ್, ಶಂಕರ ಬಾಳಿಕಾಯಿ, ಸುಭಾಸ ಓದುನವರ, ಸುರೇಶ ರಾಚನಾಯ್ಕರ್, ನೀಲಪ್ಪ ಕರ್ಜೆಕಣ್ಣವರ, ಚನ್ನಪ್ಪ ಜಗಲಿ, ನಾರಾಯಣಸಾ ಪವಾರ, ಬಸವರಾಜ ಮೆಣಸಿನಕಾಯಿ, ವೀರೂಪಾಕ್ಷ ಆದಿ, ಜಯಶ್ರೀ ಹೊಸಮನಿ, ಅಶ್ವಿನಿ ಅಂಕಲಕೋಟಿ, ಮಾಲಾ ದಂಧರಗಿ, ಗೀತಾ ಮಾನ್ವಿ, ಇತರರಿದ್ದರು. ಭಾರತಿ ವಿದ್ಯಾಭವನದ ವಿಶೇಷಾಧಿಕಾರಿ ಸಿ.ಎನ್. ಅಶೋಕ ಕುಮಾರ ಹಾಗೂ ಪೂರ್ಣಾಜಿ ಖರಾಟೆ ನಿರ್ವಹಿಸಿದರು.
ಸೋಮೇಶ್ವರನಿಗೆ ನಾದ ನೈವೇದ್ಯ
ಸೂರ್ಯನ ಹೊಂಗಿರಣಗಳ ಚಿತ್ತಾರ, ದೇವಸ್ಥಾನದ ಘಂಟೆ-ಜಾಗಟೆಗಳ ಝೇಂಕಾರದ ಮಧ್ಯೆ ಮೊದಲ ದಿನದ ಪುಲಿಗೆರೆ ಉತ್ಸವ ಮಂಜುನಾಥ ಭಜಂತ್ರಿ ಅವರ ಶಹನಾಯಿ ನಿನಾದದೊಂದಿಗೆ ಆರಂಭಗೊಂಡಿತು.
ಉದಯರಾಗ-1ರಲ್ಲಿ ಮಂಜುನಾಥ ಭಜಂತ್ರಿ ಅವರು ನಟಭೈರವ ರಾಗದೊಂದಿಗೆ ಪ್ರಸ್ತುತ ಪಡಿಸಿದ ಶಹನಾಯಿ ವಾದನಕ್ಕೆ ಕೊರೆವ ಚಳಿ ಮರೆತು ಸಂಗೀತ ಪ್ರೇಮಿಗಳು ತಲೆ ದೂಗಿದರು. ರಾಗ ಬಿಹಾಗದಲ್ಲಿ ಬಿಸ್ಮಿಲ್ಲಾಖಾನ್ ಅವರು ಸನಾದಿ ಅಪ್ಪಣ್ಣ ಚಿತ್ರದಲ್ಲಿ ನುಡಿಸಿದ ಕರೆದರೂ ಕೇಳದೇ ಸುಂದರನೇ ಎಂಬ ಹಾಡನ್ನು ನುಡಿಸುವ ಮೂಲಕ ಶ್ರೀ ಸೋಮೇಶ್ವರನಿಗೆ ನಾದ ನೈವೇದ್ಯ ಮಾಡಲಾಯಿತು. ಅವರಿಗೆ ದೇಸಾಯಿ ಕಲ್ಲೂರಿನ ಮಲ್ಲೇಶ ಹೂಗಾರ ತಬಲಾ ಸಾಥ್ ನೀಡಿದರು.
ಬಳಿಕ ಕಲಾವಿದೆ ರಾಜೇಶ್ವರಿ ವಿ. ಪಾಟೀಲ ಅವರು ರಾಗ್ ಬಿಲಾಸ್ಖಾನ್ ತೋಡಿಯಲ್ಲಿ ಹಿಂದುಸ್ತಾನಿ ಗಾಯನ ಪ್ರಸ್ತುತ ಪಡಿಸಿದರು. ಅಲ್ಲಮಪ್ರಭು ಕಡಕೋಳ ತಬಲಾ, ಡಾ. ಅರಣ್ಯಕುಮಾರ ಮುನೇನ್ನಿ ಇಸ್ರಾಜ್, ಪ್ರಿಯಾಂಕಾ ಹಾವೇರಿ ತಾನ್ಪೂರ ಹಾಗೂ ಮನೋಹರ ಜೋಶಿ ತಾಳಕ್ಕೆ ಸಾಥ್ ನೀಡಿದರು. ಇದರೊಂದಿಗೆ ಪ್ರಾತಃಕಾಲದ ಸಂಗೀತ ಕಾರ್ಯಕ್ರಮ ಸಂಪನ್ನಗೊಂಡಿತು.
ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ
ಪುಲಿಗೆರೆಯ ಆರಾಧ್ಯದೈವ ಶ್ರೀ ಸೋಮೇಶ್ವರನ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಶುಕ್ರವಾರ ಸಕಲ ವಾದ್ಯವೈಭವಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಮೆರವಣಿಗೆಯಲ್ಲಿ ಮುಂಡರಗಿಯ ಎಸ್. ನಿಂಗಪ್ಪ, ಎಚ್., ಗುಡ್ಡದ ಕಲಾ ತಂಡದ ಡೊಳ್ಳು ಕುಣಿತ, ಗೊಜನೂರಿನ ವೀರಭದ್ರೇಶ್ವರ ಕಲಾ ತಂಡದವರ ನಂದಿಕೋಲು ಮೆರವಣಿಗೆಯ ರಂಗು ಹೆಚ್ಚಿಸಿದ್ದವು. ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಸೋಮೇಶ್ವರನ ಮೂರ್ತಿಯನ್ನಿರಿಸಿ ಜಾಗಟೆ ಗಂಟೆಗಳ ನಾದ ಹರ ಹರ ಮಹಾದೇವ ಉದ್ಘೋಷಗಳೊಂದಿಗೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಹಿರಿಯರಾದ ಎಸ್.ಪಿ. ಪಾಟೀಲ, ಶಿವಣ್ಣ ನೆಲವಗಿ, ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ಶಂಕರ ಬಾಳಿಕಾಯಿ, ಬಾಳಿಕಾಯಿ, ನೀಲಪ್ಪ ಕರ್ಜೆಕಣ್ಣವರ, ಎಂ.ಕೆ. ಕಳ್ಳಿಮಠ, ರಾಘು ಪೂಜಾರ, ಗಂಗಾಧರ ಮೆಣಸಿನಕಾಯಿ, ಸೋಮಣ್ಣ ತಂಡಿಗೇರ, ಕಾಶಪ್ಪ ಮುಳಗುಂದ, ಅರ್ಚಕ ಸಮೀರ ಪೂಜಾರ, ಎಸ್.ಜಿ. ಹೂವಿನ, ಬಾಳೆಹಳ್ಳಿಮಠ, ಚನ್ನಪ್ಪ ಉಮಚಗಿ, ಮುರಿಗೆಪ್ಪ ಸವಣೂರ ಸೇರಿ ದೇವಸ್ಥಾನ ಭಕ್ತರ ಸಮಿತಿ ಸದಸ್ಯರು, ಮುಖಂಡರು, ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಪುಲಿಗೆರೆ ಉತ್ಸವದಲ್ಲಿಂದು
ಉದಯರಾಗ 2 ರಲ್ಲಿ ಬೆಳಗ್ಗೆ 6.30ಕ್ಕೆ ವಿಶಾಲ ಹೆಗಡೆ ಮತ್ತು ಹರೀಶ ಹೆಗಡೆ ಅವರಿಂದ, ಸಂಜೆ 7.30ಕ್ಕೆ ಸುಜಾತಾ ಗುರವ ಅವರಿಂದ ಹಿಂದುಸ್ತಾನಿ ದ್ವಂದ್ವ ಗಾಯನ ನಡೆಯಲಿದೆ. ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿತಾರ ಮತ್ತು ಸಂತೂರ ಜುಗಲ್ಬಂದಿ ನಡೆಯಲಿದ್ದು, ಸಂಜೀವ ಕೋರ್ಟಿ ಸಿತಾರವಾದನ ಹಾಗೂ ಅಶ್ವಿನ್ ವಾಲ್ವಾಲಕರ್ ಅವರ ಸಂತೂರ ವಾದನ ಪ್ರಸ್ತುತ ಪಡಿಸುವರು. ಸಂಜೆ 7.30ಕ್ಕೆ ನಡೆಯುವ ನೃತ್ಯ ವೈಭವದಲ್ಲಿ ಬೆಂಗಳೂರಿನ ರಿಥ್ವೋಷನ್ ಕಲಾವಿದರಿಂದ ಭರತನಾಟ್ಯ ಮತ್ತು ಕಥಕ್ ನೃತ್ಯ ವಿವಿಧ ಪ್ರದರ್ಶನ ನಂತರ ರಾತ್ರಿ 8.30ಕ್ಕೆ ಪುಣೆಯ ಆಸ್ಮಿತ ಠಾಕೂರ್ ಮತ್ತು ತಂಡದಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ.