ಉತ್ಪನ್ನದ ಬೆಲೆ, ಗುಣಮಟ್ಟ ಪರಿಶೀಲಿಸಿ; ಕಡ್ಡಾಯವಾಗಿ ರಶೀಧಿ ಪಡೆಯಿರಿ

24CBP3FoodMeeting
Published on

ಚಿಕ್ಕಬಳ್ಳಾಪುರ: ಯಾವುದೇ ವಸ್ತುಗಳನ್ನು ಖರೀದಿಸುವಾಗ, ಸೇವೆ ಪಡೆಯುವಾಗ ಬೆಲೆ, ಗುಣಮಟ್ಟವನ್ನು ಮೊದಲ ಪರಿಶೀಲಿಸಬೇಕು. ಒಂದೊಮ್ಮೆ ಉತ್ಪನ್ನಗಳ ಖರೀದಿ ಮತ್ತು ಸೇವೆಯಲ್ಲಿ ವಂಚನೆಯಾದರೆ ಪ್ರಕರಣ ದಾಖಲಿಸಿ, ನ್ಯಾಯ ಪಡೆಯಬೇಕು ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಆರ್.ಲತಾ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ರಾಷ್ರ್ಟೀಯ ಗ್ರಾಹಕರ ದಿನ ಹಾಗೂ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಒಂದು ವಸ್ತುವನ್ನು ಖರೀದಿಸುವಾಗ ಆ ವಸ್ತುವಿನ ಬೆಲೆ, ಗುಣಮಟ್ಟವನ್ನು ತಿಳಿದುಕೊಳ್ಳುವುದು ಹಾಗೂ ಕೊಟ್ಟ ಹಣಕ್ಕೆ ಅನುಗುಣವಾಗಿ ಖರೀದಿಯ ರಸೀಧಿ ಕಡ್ಡಾಯವಾಗಿ ಪಡೆಯುವುದು ಗ್ರಾಹಕನ ಕರ್ತವ್ಯವಾಗಿದೆ ಎಂದು ಡಿಸಿ ತಿಳಿಸಿದರು.

ಪ್ರತಿ ವಸ್ತು, ಉತ್ಪನ್ನಕ್ಕೂ ಒಂದು ಕಾಲಮಿತಿ ಇರುತ್ತದೆ. ವ್ಯಾಪಾರಸ್ಥರು ಸಹ ಅಧಿಕೃತ ದೃಢೀಕರಣದ ಮಾಹಿತಿಯನ್ನು ಗ್ರಾಹಕರಿಗೆ ನೀಡಬೇಕೆಂದು ಸೂಚಿಸಿದರು.

ಗ್ರಾಹಕರ ಹಕ್ಕುಗಳ ಸಂರಕ್ಷಣೆ ಕಾಯ್ದೆ ಕುರಿತು ತಿಳಿದುಕೊಳ್ಳುವುದರಿಂದ ಗುಣಮಟ್ಟದ ಸೇವೆ ಪಡೆಯುವುದರ ಜತೆಗೆ ವಂಚನೆಗೊಳಗಾಗುವುದು ತಪ್ಪುತ್ತದೆ. ಒಂದು ವೇಳೆ ಸಮಸ್ಯೆಗಳು ಎದುರಾದಾಗ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಎನ್.ಶ್ರೀನಿವಾಸಯ್ಯ ಹೇಳಿದರು.

ಗ್ರಾಹಕರ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹಾಗೆಯೇ ಗ್ರಾಹಕರ ಹಿತ ಕಾಪಾಡುವ ಉದ್ದೇಶದಿಂದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಉಪ ನಿರ್ದೇಶಕಿ ಪಿ.ಸವಿತಾ, ಸಹಾಯಕ ನಿರ್ದೇಶಕಿ ಮಾಲಾ ಕಿರಣ್ ಮತ್ತಿತರರು ಇದ್ದರು.

ಗ್ರಾಹಕರ ಕಾಯ್ದೆ ಬಗ್ಗೆ ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಶ್ರೀಪತಿ, ಗ್ರಾಹಕರು ಮೋಸ, ವಂಚನೆಗೊಳಗಾದಾಗ ತಕ್ಷಣವೇ ಹತ್ತಿರದ ಪೋಲಿಸ್ ಠಾಣೆ, ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು. ಸೂಕ್ತ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಿದಾಗ ಎರಡು ಕಡೆ ವಾದ ಪ್ರತಿವಾದಗಳನ್ನು ಆಲಿಸಿ, ನ್ಯಾಯ ಒದಗಿಸಲಾಗುತ್ತದೆ ಎಂದರು.

ಗ್ರಾಹಕರ ಕಾಯ್ದೆಯಲ್ಲಿ ಗ್ರಾಹಕರ ಜವಾಬ್ದಾರಿ, ನಿರ್ವಹಣೆ ಮತ್ತು ನ್ಯಾಯ, ಪರಿಹಾರದ ಬಗ್ಗೆ ತಿಳಿಸಲಾಗಿದೆ. ಮುಖ್ಯವಾಗಿ ಗ್ರಾಹಕರಿಗೆ ನೀಡುವ ಉತ್ಪನ್ನಗಳಿಗೆ ವ್ಯಾಪಾರಸ್ಥರು ಬ್ಯಾಚ್ ನಂಬರ್, ತಯಾರಿಕಾ ದಿನಾಂಕದ ಅವಧಿ ಮತ್ತು ಮುಗಿಯುವ ದಿನಾಂಕವನ್ನು ಸಹ ಮುದ್ರಿಸುವುದು ಕಡ್ಡಾಯ. ಸೇವೆಯ ವಿಚಾರದಲ್ಲೂ ಗ್ರಾಹಕರಿಗೆ ಮೊದಲೇ ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.

ತೂಕ ಅಳತೆ ವಸ್ತು ಪ್ರದರ್ಶನ: ಕಾಲೇಜಿನ ಆವರಣದಲ್ಲಿ ವಸ್ತು ಪ್ರದರ್ಶನ ಕೈಗೊಳ್ಳಲಾಗಿತ್ತು. ಹಳೇ ಮತ್ತು ಹೊಸ ತೂಕ ಅಳತೆ ಮಾಪನ ಯಂತ್ರಗಳು, ವಂಚನೆ ಪತ್ತೆ ಹಚ್ಚುವಿಕೆ, ಗ್ರಾಹಕ ಕಾಯ್ದೆ ಭಿತ್ತಿಪತ್ರಗಳು, ಜಾಗೃತಿ ವಿಡಿಯೋ ತುಣುಕುಗಳು ಗಮನ ಸೆಳೆದವು. ಜಿಲ್ಲಾ ಗ್ರಾಹಕರ ವ್ಯವಹಾರಗಳ ಇಲಾಖೆ ಸಿಬ್ಬಂದಿ ವೀಕ್ಷಕರಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net