ಉತ್ಪನ್ನ ಖರೀದಿ ಹಣ ಶೀಘ್ರ ಬಿಡುಗಡೆಯಾಗಲಿ

Published on

ಗುಂಡ್ಲುಪೇಟೆ: ಪ್ರಸ್ತುತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಮತ್ತು ಹೆಸರುಕಾಳು ಉತ್ಪನ್ನಗಳ ಖರೀದಿ ಮಾಡಿದ್ದು, ರೈತರಿಗೆ ಡಿಬಿಟಿ ಮೂಲಕ ಹಣ ಬಿಡುಗಡೆಯಾಗಿಲ್ಲ. ಆದ್ದರಿಂದ ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ಪ್ರಗತಿಪರ ರೈತ ಹಂಗಳ ನಂದೀಶ್ ಒತ್ತಾಯಿಸಿದ್ದಾರೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಮೂಲಕ ಸೂರ್ಯಕಾಂತಿ ಖರೀದಿ ಕೇಂದ್ರ ತೆರೆಯಲಾಗಿದ್ದು, ರಾಜ್ಯ ಸರ್ಕಾರ ಸಹಯೋಗದೊಂದಿಗೆ ಈಗಾಗಲೇ ಕಳೆದ ಒಂದು ತಿಂಗಳಿಂದ ನೂರಾರು ಕ್ವಿಂಟಾಲ್ ಸೂರ್ಯಕಾಂತಿ ಖರೀದಿಸಿದೆ. ಆದರೆ ಈಗಾಗಲೇ ರೈತರು ಸೂರ್ಯಕಾಂತಿ ಮಾರಾಟ ಮಾಡಿದ ಹಣ ರೈತರ ಖಾತೆಗೆ ಬಂದಿಲ್ಲ. ಹಾಗಾಗಿ ಆದಷ್ಟು ಬೇಗ ಹಣ ಬಿಡುಗಡೆ ಮಾಡುವಂತೆ ರೈತರು ಹಾಗೂ ಹಂಗಳ ನಂದೀಶ್ ಒತ್ತಾಯಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನಲ್ಲಿ ಈಗಾಗಲೆ ರೈತರ ಬಳಿ ಸೂರ್ಯಕಾಂತಿ ಆರು ಸಾವಿರ ಕ್ವಿಂಟಾಲ್ ಖರೀದಿಸಿದ್ದು ಇನ್ನೂ ಐದು ಸಾವಿರ ಖರೀದಿ ಮಾಡುವ ಚಿಂತನೆ ಇದೆ. ರೈತರು ಸಾಕಷ್ಟು ಸಮಸ್ಯೆಯಲ್ಲಿದ್ದು ವ್ಯವಸಾಯ ಚಟುವಟಿಕೆಗೆ ಅವರಿಗೆ ಹಣದ ಅವಶ್ಯಕತೆ ಇರುವುದರಿಂದ ಸರ್ಕಾರ ರೈತರ ಸಮಸ್ಯೆಯನ್ನು ತಿಳಿದುಕೊಂಡು ಖರೀದಿಸುವ ಸೂರ್ಯಕಾಂತಿ ಹಣ ಬಿಡುಗಡೆ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ. ಸರ್ಕಾರ ಈಗ ಇಡೀ ರಾಜ್ಯಕ್ಕೆ 43 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಅದು ಉಪಯೋಗವಿಲ್ಲ, ಸಂಪೂರ್ಣವಾಗಿ ಎಲ್ಲ ರೈತರಿಗೂ ಆದಷ್ಟು ಬೇಗ ಪೂರ್ಣ ಹಣ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ರೈತರು ಬಿತ್ತನೆಯಿಂದ ಹಿಡಿದು ಕಟಾವು ಮಾಡುವವರೆಗೂ ಸಾಲ ಮಾಡಿ ವ್ಯವಸಾಯ ಮಾಡಿದ್ದಾರೆ. ಸೂರ್ಯಕಾಂತಿ ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿದ್ದು ಕೆಲವು ರೈತರು ಇಪ್ಪತ್ತು ದಿನದ ಹಿಂದೆಯೇ ಸೂರ್ಯಕಾಂತಿ ನೀಡಿದ್ದು ಹಣ ಬಿಡುಗಡೆ ವಿಳಂಬದಿಂದ ಸಮಸ್ಯೆ ಎದುರಿಸುತಿದ್ದಾರೆ. ಆದಷ್ಟು ಬೇಗ ಸರ್ಕಾರ ಹಣ ಬಿಡುಗಡೆ ಮಾಡಿ ರೈತರಿಗೆ ಅನುಕೂಲವಾಗುತ್ತದೆ. ನಂದೀಶ್, ಪ್ರಗತಿಪರ ರೈತ, ಹಂಗಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net