

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಸಮೀಪದ ಉತ್ತೂರು ಗ್ರಾಮದಲ್ಲಿ 8 ದಿನಗಳಿಂದ ಜರುಗಿದ ಉತ್ತೂರಮ್ಮನ ಹಬ್ಬಕ್ಕೆ ಇತ್ತೀಚೆಗೆ ತೆರೆಬಿದ್ದಿತು. ನೂರಾರು ಭಕ್ತರ ಸಮ್ಮುಖದಲ್ಲಿ ಅಗಿಷ್ಟಿಕೆ ಉತ್ಸವ ನೆರವೇರಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು. ಯುಗಾದಿ ಹಬ್ಬವಾದ ಒಂದು ವಾರದ ನಂತರ ಗ್ರಾಮದಲ್ಲಿ ಜರುಗುವ ಹಬ್ಬ 8 ದಿನಗಳ ಕಾಲ ನಡೆಯುತ್ತದೆ. ಅಗಿಷ್ಟಿಕೆ (ಮಣ್ಣಿನ ಗಡಿಗೆ) ಪ್ರತಿಷ್ಠಾಪಿಸಿ ಲೋಕಕಲ್ಯಾಣಕ್ಕಾಗಿ ಹುಣಸೆ ಮರದ ತುಂಡುಗಳನ್ನು ಹಾಕಿ ಬೆಂಕಿ ಹೊತ್ತಿಸಿ ಪೂಜೆ ಸಲ್ಲಿಸಲಾಗಿದ್ದು, ಎಂಟು ದಿನಗಳ ಕಾಲ ಮಣ್ಣಿನ ಗಡಿಗೆಯಲ್ಲಿ ಬೆಂಕಿ ಆರದ ರೀತಿ ನೋಡಿಕೊಳ್ಳುವ ಪೂಹೆ ಸಲ್ಲಿಸಲಾಗಿತ್ತು. ಬಿ.ಜಿ.ಪುರ ಗ್ರಾಮದಿಂದ ಪ್ರಧಾನ ಅರ್ಚಕ ಜಯಕುಮಾರ್ ಉತ್ತೂರಮ್ಮನ ಕೇಲು ಹೊತ್ತು ಕುರುಬನಕಟ್ಟೆ ಲಿಂಗಯ್ಯ-ಚನ್ನಯ್ಯ, ಸಿದ್ದಾಪ್ಪಾಜಿ ಕಂಡಾಯಗಳೊಡನೆ ಮೆರವಣಿಗೆ ಮೂಲಕ ಉತ್ತೂರು ಗ್ರಾಮಕ್ಕೆ ಆಗಮಿಸಿದರು. ಕೇಲನ್ನು ದೇವಸ್ಥಾನದ ಗದ್ದುಗೆ ಮೇಲಿರಿಸಿ ಮಣ್ಣಿನ ಗಡಿಗೆಯಲಿ ಬೆಂಕಿ ಉಂಡೆಗಳನ್ನು ಮೈ ಮೇಲೆ ಎರೆಚಿಕೊಂಡು, ಗಡಿಗೆಯನ್ನು ತಬ್ಬಿಕೊಂಡು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ಈ ವೇಳೆ ಭಕ್ತರು ಉತ್ತೂರಮ್ಮನಿಗೆ ಜಯಘೋಷಣೆಗಳನ್ನು ಕೂಗುತ್ತಾ ಭಕ್ತಿ ಸಮರ್ಪಿಸಿದರು.