ಉತ್ತಿ ಬೆಳೆದ ಬೆಳೆ ಉಳಿಯೋದು ಕಷ್ಟ

It is difficult to survive a crop that has been grown in a hurry.
ಕೃಷ್ಣೆಯ ಅಬ್ಬರಕ್ಕೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ನದಿ ತೀರದಲ್ಲಿ ಕಬ್ಬು ಬೆಳೆ ಜಲಾವೃತವಾಗಿರುವುದು.
Published on

ತುಬಚಿ: ಭೂಮಿ ನಮ್ಮ ಪಾಲಿಗೆ ತಾಯಿ ಇದ್ದಂತೆ. ಅವಳು ಬೆಳೆದರೆ ವರ್ಷದ ಅನ್ನದ ಬಟ್ಟಲು ತುಂಬುತ್ತದೆ. ಆದರೆ, ಪ್ರವಾಹ ಎನ್ನುವ ಚೆಲ್ಲಾಟ ನಮ್ಮ ಜೀವನ ಮೂರಾಬಟ್ಟೆ ಮಾಡುತ್ತಿದೆ. ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳು ನೀರಿನಲ್ಲಿ ಮುಳುಗುತ್ತಿವೆ. ಕಣ್ಣೆದುರೇ ಬದುಕು ಕಮರಿ ಹೋಗುತ್ತಿದೆ.

ಇದು ಕೃಷ್ಣಾ ನದಿ ತೀರದ ಅನ್ನದಾತರ ನೋವಿನ ನುಡಿಗಳಿವು. ಕಬ್ಬು, ಗೋವಿನ ಜೋಳ, ಈರುಳ್ಳಿ, ಸೂರ್ಯಪಾನ, ಸೋಯಾಬಿನ್ ಸೇರಿ ವಿವಿಧ ಬೆಳೆಗಳನ್ನು ರೈತರು ಬಿತ್ತಿ ಬೆಳೆದಿದ್ದಾರೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಉಳಿಯುವುದು ಕಷ್ಟಕರ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ನದಿ ಮೈದುಂಬಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನೀರಿನಮಟ್ಟದಿಂದ ನದಿ ತೀರದ ಕೆಲ ಜಮೀನುಗಳು ಜಲಾಹುತಿಯಾಗಿವೆ. ಗ್ರಾಮಸ್ಥರಲ್ಲಿ ಪ್ರವಾಹ ಭೀತಿ ಮೂಡಿದೆ. ಸರ್ಕಾರ ನೀಡುವ ಪರಿಹಾರ ಯಾತಕ್ಕೂ ಸಾಲುತ್ತಿಲ್ಲ. ಮೇಲಿಂದ ಮೇಲೆ ಪ್ರವಾಹ ಬಂದು ಬೆಳೆಗಳು ನಾಶವಾದರೆ ಮಕ್ಕಳ ಶಾಲೆ ಶುಲ್ಕ ಕಟ್ಟುವುದು , ಆಸ್ಪತ್ರೆ ಖರ್ಚು ಭರಿಸುವುದು, ದನಗಳಿಗೆ ಮೇವು ಹಾಕುವುದು ಕೂಡ ದುರ್ಲಬವಾಗುತ್ತದೆ. ಎಲ್ಲಿಯಾದರೂ ಗುಳೆ ಹೋಗೋಣ ಎನ್ನುವ ಆಲೋಚನೆ ಮಾಡುವಷ್ಟರ ಮಟ್ಟಿಗೆ ಪ್ರವಾಹ ಕಾಡತೊಡಗಿದೆ.

ಎಲ್ಲೆಲ್ಲಿ ಸಂಚಾರ ಸ್ಥಗಿತ : ತುಬಚಿ, ಮುತ್ತೂರು ನಡುಗಡ್ಡೆ, ಜಮಖಂಡಿ ತಾಲೂಕಿನ ತುಬಚಿ ಹಾಗೂ ಅಥಣಿ ತಾಲೂಕಿನ ಜುಂಜುರವಾಡ ಮಾರ್ಗದ ಸೇತುವೆ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ತುಬಚಿ ಗ್ರಾಮದ ಕಾತರ ನಡುಗಡ್ಡೆ, ಶೂರ್ಪಾಲಿ ಗ್ರಾಮದ ಹೊಂಡಾರ ಸಂಪರ್ಕಗಳು ಸ್ಥಗಿತಗೊಂಡಿವೆ.

ತುಬಚಿ ಹಾಗೂ ಮುತ್ತೂರು ನಡುಗಡ್ಡೆಗೆ ಹೋಗಿ-ಬರಲು ಬೋಟಿನ ವ್ಯವಸ್ಥೆ ಮಾಡಬೇಕು. ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾಗಲಿವೆ. ಸರ್ಕಾರ ನೀಡುವ ಪರಿಹಾರ ಯಾತಕ್ಕೂ ಸಾಲುವುದಿಲ್ಲ. ಭಗವಂತನೇ ನಮ್ಮನ್ನು ಕಾಪಾಡಬೇಕು. ಇಲ್ಲವಾದಲ್ಲಿ ಗುಳೆ ಹೋಗುವುದು ಅನಿವಾರ್ಯ. -ಪರಸಪ್ಪ ಕುಂಬಾರ, ತುಬಚಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net