ಉತ್ತರ ಕರ್ನಾಟಕದ ಜನರು ಸಡಿಲು ಸಿಕ್ಕಿದ್ದೇವಾ?

bkt-04-14
ಬಾಗಲಕೋಟೆ ಜಿಲ್ಲಾಡಳಿತ ಭವನದ ಪ್ರವೇಶದ ದ್ವಾರದ ಎದುರು ಮುಳುಗಡೆ ಸಂಸತ್ರಸ್ತರು ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ.
Published on

ಬಾಗಲಕೋಟೆ: ಕಾವೇರಿ ನದಿ ನೀರನ್ನು ಕೋರ್ಟ್ ಆದೇಶದ ಮೇರಿಗೆ ಒಂದು ಅಥವಾ ಎರಡು ಟಿಎಂಸಿ ನೀರು ಹರಿಸಬೇಕೆಂದರೆ ಬೆಂಗಳೂರಗೆ ಬೆಂಕಿ ಬೀಳುತ್ತದೆ. ಅಷ್ಟೊಂದು ಪ್ರತಿಭಟನೆ ವ್ಯಕ್ತವಾಗುತ್ತದೆ. ಆದರೆ, ಕಳೆದ ಒಂದು ದಶಕದಿಂದ ಪ್ರತಿ ವರ್ಷ ಕೃಷ್ಣಾ ನದಿಯಿಂದ ನಮ್ಮ ಪಾಲಿನ ೧೩೦ ಟಿಎಂಸಿ ನೀರು ಹರಿದು ಆಂಧ್ರಕ್ಕೆ ಹೋಗುತ್ತಿದೆ. ಆದರೂ ಸರ್ಕಾರ ಈ ಬಗ್ಗೆ ಏನನ್ನೂ ಮಾತನಾಡಲ್ಲ ಎಂದರೆ ಉತ್ತರ ಕರ್ನಾಟಕದ ಜನರು ನಿಮಗೆ ಅಷ್ಟೊಂದು ಸಡಿಲು ಸಿಕ್ಕಿದ್ದೇವಾ? ಹೀಗೆಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಅವರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ಇಲ್ಲವೇ ರದ್ದು ಪಡಿಸಿ ಎಂದು ಆಗ್ರಹಿಸಿ ಮುಳುಗಡೆ ಸಂತ್ರಸ್ತರು ಬಾಗಲಕೋಟೆ ಜಿಲ್ಲಾಡಳಿತ ಭವನದ ಎದುರು ಆಹೋರಾತ್ರಿ ಧರಣಿ ಸತ್ಯಾಗ್ರಹದ ೨ನೇ ದಿನವಾದ ಬುಧವಾರ ಹೋರಾಟದಲ್ಲಿ ಪಾಲ್ಗೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ಸಮ್ಮುಖದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ನ ಹೆಚ್ಚು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದರೆ ಕಾವೇರಿ ಜಲಾಲಯನ ಪ್ರದೇಶಕ್ಕೆ ಕೃಷ್ಣಾ ನದಿ ನೀರನ್ನು ತೆಗೆದುಕೊಂಡು ಹೋಗಲು ಕೇಳಬಹುದು ಎಂದಿದ್ದರು. ಮಾಜಿ ಪ್ರಧಾನಮಂತ್ರಿಗಳು ಕೃಷ್ಣಾ ನೀರಿನ ಮೇಲೆ ಗುರಿ ಇಟ್ಟಿದ್ದಾರೆ. ಇದು ಬಹಳ ಗಂಭೀರವಾದ ವಿಚಾರ. ಕೃಷ್ಣಾ ನದಿ ನೀರನ್ನು ನಮ್ಮ ಹೆಣದ ಮೇಲೆ ತೆಗೆದುಕೊಂಡು ಹೋಗಬೇಕೆ ವಿನಃ ಅದನ್ನು ಸುಮ್ಮನೆ ಬಿಟ್ಟು ಕೊಡುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದರು.

ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ನೆನೆಗುದಿಗೆ ಬಿದ್ದಿದ್ದರಿಂದ ಒಂದು ದಶಕದಲ್ಲಿ ನಮ್ಮ ಪಾಲಿನ ವಾರ್ಷಿಕ ೧೩೦ ಟಿಎಂಸಿ ನೀರು ಪೋಲಾಗುತ್ತಿದೆ. ಒಟ್ಟಾರೆ, ಈ ವರೆಗೂ ೫೬೧೧ ಟಿಎಂಸಿ ನೀರು ಪೋಲಾಗಿದೆ. ಇದನ್ನು ಕೇಳುವವರು ಯಾರು?

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಬರೀ ಮುಳುಗಡೆ ಜಿಲ್ಲೆ, ಫಲಾನುಭವಿಗಳ ಜಿಲ್ಲೆಗಳು ಮಾತ್ರವಲ್ಲದೇ ಉತ್ತರ ಕರ್ನಾಟಕದ ೧೪ ಜಿಲ್ಲೆಗಳ ಜನರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ರಾಜ್ಯ ಹಾಗೂ ದೇಶ ಮಾತ್ರವಲ್ಲ. ಇಡೀ ಜಗತ್ತಿನ ಯಾವುದೇ ದೇಶ ಹಾಗೂ ಪ್ರದೇಶಗಳಿಗೂ ಉತ್ತರ ಕರ್ನಾಟಕಕ್ಕೆ ಆಗಿರುಷ್ಟು ಅನ್ಯಾಯ ಎಲ್ಲೂ ಆಗಿಲ್ಲ. ೬೦ ವರ್ಷವಾದರೂ ಒಂದು ಯೋಜನೆ ಮುಗಿದಿಲ್ಲ. ಜಲಾಶಯದ ಆಯುಷ್ಯವಾದರೂ ಎಷ್ಟು ವರ್ಷ ಇರುತ್ತದೆ. ಹೂಳೂ ತುಂಬಿ ವರ್ಷ ವರ್ಷ ನೀರು ಸಂಗ್ರಹ ಸಾಮರ್ಥ್ಯೆ ಕಡಿಮೆ ಆಗುತ್ತ ಹೋಗುತ್ತದೆ. ಇನ್ನು ೩೦-೪೦ ವರ್ಷ ಕಳೆದರೆ ಇಡೀ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯೆವೆಲ್ಲ ಹೂಳು ತುಂಬಿ ಹೋಗಿರುತ್ತದೆ. ಈಗ ನಡೆದಿರುವ ಯೋಜನೆ ವೇಗ ನೋಡಿದರೆ ಮುಂದೆ ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸುವ ಪ್ರಶ್ನೆಯೇ ಬರಲ್ಲ. ಅದರಿಂದ ಇಡೀ ಯೋಜನೆ ವಿಫಲವಾಗಿ, ಉತ್ತರ ಕರ್ನಾಟಕ ಭಿಕ್ಷುಕರ ನಾಡಾಗುತ್ತದೆ ಎಂದು ಅತ್ಯಂತ ನೋವಿನಿಂದ ಹೇಳಿದರು.

ಕೃಷ್ಣಾ ಮುಳುಗಡೆ ಸಂತ್ರಸ್ತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬುಧವಾರ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ, ಅರುಣ ಕಾರಜೋಳ, ಶೇಖರ ಮಾನೆ, ಅದೃಶ್ಯಪ್ಪ ದೇಸಾಯಿ, ಮಲ್ಲಿಕಾರ್ಜುನ ಚರಂತಿಮಠ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net