

ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ವಿಚಾರ ಮತ್ತೆ ಬಹು ಚರ್ಚಿತ ವಿಷಯವಾಗಿದೆ.
ವಿಧಾನಸಭೆ ಅಧಿವೇಶನದಲ್ಲಿ ಕಾರವಾರ, ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಆರೋಗ್ಯ ಸಚಿವರು ನೀಡಿರುವ ಲಿಖಿತ ಉತ್ತರ ಈಗ ಜಿಲ್ಲೆಯ ನೆಟ್ಟಿಗರ ಆಕ್ಷೇಪಕ್ಕೆ ಕಾರಣವಾಗಿದೆ.
ಕಾರವಾರ ಸರ್ಕಾರಿ ಮೆಡಿಕಲ್ ಕಾಲೇಜ್ ನಲ್ಲಿ ಹೃದ್ರೋಗ, ನರರೋಗ, ಮಕ್ಕಳ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಊರಾಲಜಿ ಮುಂತಾದ 7 ಸೂಪರ್ ಸ್ಪೆಷಾಲಿಟಿ ವೈದ್ಯರ ನೇಮಕಕ್ಕೆ 2020 ರಲ್ಲಿ ಎರಡು ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ನೆಪ್ರಾಲಜಿ ಬಿಟ್ಟು ಬೇರ್ಯಾವುದೇ ವಿಭಾಗಕ್ಕೆ ವೈದ್ಯರು ಬಂದಿಲ್ಲ ಎಂದು ಸುಧಾಕರ ಉತ್ತರಿಸಿದ್ದಾರೆ.
ಕಾರವಾರದ ಕ್ರಿಮ್ಸ್ ನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ವಿಳಂಬವೇಕಾಗಿದೆ. ಮಂಜೂರಿಗೆ ಇನ್ನೆಷ್ಟು ಕಾಲ ಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಸುಧಾಕರ್, ಕಾರವಾರದ ಕ್ರಿಮ್ಸ್ ನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ಸಿಬ್ಬಂದಿ ಸಲಕರಣೆ ಮುಂತಾದ ಪ್ರಸ್ತಾವ ಪಡೆದು ಅನುಮೋದನೆಗೆ ಆರ್ಥಿಕ ಇಲಾಖೆಗೆ ಕಳಿಸಲಾಗಿತ್ತು. ಆದರೆ, ಆರ್ಥಿಕ ಇಲಾಖೆಯ ಅನುಮೋದನೆ ದೊರಕಿಲ್ಲ. ಇನ್ನೊಮ್ಮೆ ಕಡತವನ್ನು ಮಂಡಿಸಲಾಗುವುದು ಎಂದಿದ್ದಾರೆ.
ಸಚಿವರ ಈ ಉತ್ತರದ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಇಲಾಖೆ ತಿರಸ್ಕಾರ ಮಾಡಲು ಇದೇನು ಐಶಾರಾಮಿಯ ಬೇಡಿಕೆಯಲ್ಲ. ಜನರ ಜೀವದ ಪ್ರಶ್ನೆ ಎಂದಿದ್ದಾರೆ.