

ಬೇಲೂರು: ಲಯನ್ಸ್ ಸಂಸ್ಥೆಯ ಹಲವಾರು ವರ್ಷಗಳ ನಿರಂತರ ಸೇವಾ ಕಾರ್ಯಗಳು ಜನರ ಮೆಚ್ಚುಗೆ ಗಳಿಸಿರುವುದರಿಂದ ಎಲ್ಲರ ಸಹಕಾರದೊಂದಿಗೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇದೆ ಎಂದು ಲಯನ್ಸ್ ಸಂಸ್ಥೆ ಉಪ ಪ್ರಾಂತಪಾಲ ಅರವಿಂದ್ ಶೆಣೈ ಹೇಳಿದರು.
ತಾಲೂಕಿನ ಬಿಕ್ಕೋಡು ಶಿವಗಂಗಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಶಿವಶಂಕರ್ ಮಾತನಾಡಿ, ವೈಯಕ್ತಿಕವಾಗಿ ಅನೇಕ ಒತ್ತಡಗಳಿದ್ದರೂ ಕಳೆದ ಸಾಲಿನಲ್ಲಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಸಾಕಷ್ಟು ಸಾಮಾಜಿಕ ಸೇವಾ ಕಾರ್ಯಗಳನ್ನು ಪೂರ್ಣಗೊಳಿಸಿದ್ದೇನೆ. ಲಯನ್ಸ್ ಸಂಸ್ಥೆ ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ಪ್ರಮುಖ ಯೋಜನೆಯಾಗಿ ಬಿಕ್ಕೋಡಿನಲ್ಲಿ 12 ಲಕ್ಷ ರೂ.ವೆಚ್ಚದಲ್ಲಿ ಲಯನ್ಸ್ ಮುಕ್ತಿ ಧಾಮವನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷ ದಿನೇಶ್ ಮಾತನಾಡಿ, ಬಿಕ್ಕೋಡಿನಲ್ಲಿ ಲಯನ್ಸ್ ಸಂಸ್ಥೆ ಪ್ರಾರಂಭಿಸಿ 6ನೇ ವರ್ಷಕ್ಕೆ ಕಾಲಿಟ್ಟಿದೆ. ನಿಕಟಪೂರ್ವ ಅಧ್ಯಕ್ಷರು ಶ್ರಮವಹಿಸಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಚಿತಾಗಾರದ ಕೆಲಸ ಪೂರ್ಣಗೊಳಿಸಿ ಮಾದರಿ ಸಂಸ್ಥೆ ಎಂಬ ಹೆಸರು ಪಡೆಯಲು ಕಾರಣರಾಗಿದ್ದಾರೆ. ನನಗೆ ಸಿಕ್ಕಿರುವ ಒಂದು ವರ್ಷದ ಅವಧಿಯಲ್ಲಿ ಸರ್ವ ಸದಸ್ಯರ ಸಹಕಾರ ಹಾಗೂ ಮಾರ್ಗದರ್ಶನ ಪಡೆದು ಸಂಸ್ಥೆಯ ಪ್ರಗತಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು.
ಸಂಸ್ಥೆ ಕಾರ್ಯದರ್ಶಿ ಹೊನ್ನೇಗೌಡ, ಖಜಾಂಚಿ ಲೋಹಿತ್, ಪ್ರಾಂತೀಯ ಅಧ್ಯಕ್ಷ ಜಗದೀಶ್, ವಲಯಾಧ್ಯಕ್ಷ ಸಂತೋಷ್, ಪ್ರಾಂತೀಯ ರಾಯಭಾರಿ ಡಾ.ನವೀನ್ ಚಂದ್ರಶೆಟ್ಟಿ ಇತರರು ಇದ್ದರು.