

ಬಸವಕಲ್ಯಾಣ: ಸಾಧನೆಗೆ ಮನಸ್ಸು ಮುಖ್ಯ. ಮನಸ್ಸು ಮಾಡಿ ಉನ್ನತ ಸ್ಥಾನಕ್ಕೇರುವ ಮೂಲಕ ಜನ್ಮ ನೀಡಿದ ಮನೆ, ಸಮಾಜ ಹಾಗೂ ನಾಡಿಗೆ ಕೀರ್ತಿ ತರಬೇಕು ಎಂದು ಶಾಸಕ ಶರಣು ಸಲಗರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮರಾಠಾ ನೌಕರರ ಸಂಘ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜಮಾತಾ ಜೀಜಾವು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆಗೆ ಕಷ್ಟ, ಸಂಕಷ್ಟಗಳಾವವು ಅಡ್ಡಿಯಾಗದು ಎಂದರು.
ಎಸ್ಸೆಸ್ಸೆಲ್ಸಿ ಪಾಸಾಗಿ ಎರಡು ತಿಂಗಳ ಅಂತರದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ನೋವಿನಲ್ಲೂ ವಿಶ್ವಜೀತ ಢವಳೆ ಶ್ರಮವಹಿಸಿ ಅಭ್ಯಸಿಸುವ ಮೂಲಕ ಎಂಬಿಬಿಎಸ್ ಶಿಕ್ಷಣಕ್ಕೆ ಉಚಿತ ಪ್ರವೇಶ ಪಡೆದು ಮಾದರಿಯಾಗಿದ್ದಾನೆ ಎಂದು ಕೊಂಡಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಮಾತನಾಡಿ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ, ರಾಜ್ಯ ಸರ್ಕಾರದ ಅನೇಕ ಯೋಜನೆಗಳಿದ್ದರೂ ಸಮಾಜದ ಬಹುತೇಕರಿಗೆ ಮಾಹಿತಿ ಇಲ್ಲ. ಯೋಜನೆಗಳ ಕುರಿತು ಜಾಗೃತಿ ಮೂಡಿಸಿ ಸಮಾಜದ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಮಾಜದ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ಕಲ್ಯಾಣದ ಅಭಿವೃದ್ಧಿಗೆ ಸದಾ ಸಹಕಾರ ಇರಲಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿ ಪಾತ್ರ ಮಹತ್ವದ್ದು. ಗುಣಮಟ್ಟದ ಶಿಕ್ಷಣ ಕೊಡಿಸುವ ಜತೆಗೆ ಉತ್ತಮ ಸಂಸ್ಕಾರ ನೀಡಿ ಭವಿಷ್ಯ ರೂಪಿಸಲು ಪಾಲಕರು ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಸಹ ಶ್ರಮವಹಿಸಿ ಅಭ್ಯಸಿಸಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮೆರೆಯಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಸಮಾಜದ ಪ್ರಗತಿಗೆ ಶಿಕ್ಷಣವೇ ಪ್ರಬಲ ಅಸ್ತ್ರ. ಮನೆಯ ವಿಕಾಸದಲ್ಲಿ ಸಮಾಜದ ವಿಕಾಸ ಅಡಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಮರಾಠಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹೇಶ ಮುಳೆ ಮಾತನಾಡಿದರು. ನಗರಸಭೆ ಅಧ್ಯಕ್ಷ ಎಂಡಿ ಸಗೀರೋದ್ದಿನ್, ಸಮಾಜದ ಮುಖಂಡ ಅಂಗದರಾವ ಜಗತಾಪ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಪ್ರಮುಖರಾದ ಅರ್ಜುನ ಕನಕ, ವಸಂತರಾವ ಮಾನೆ, ಬಾಲಾಜಿ ಬಿರಾದಾರ, ವಿದ್ಯಾವತಿ ರೋಡೆ, ಭರತ ಹೆಂಬಾಡೆ, ಶಾಮ ಕಾರಭಾರಿ, ಗಿರಿಧರ ಧಾನೂರೆ, ದಿಲೀಪ ಬಿರಾದಾರ, ಭಾನುದಾಸ ಪಾಟೀಲ್, ಮಾಣಿಕ ಭುರೆ, ಅಶೋಕ ರಾಯಪಳ್ಳೆ, ಕುಸುಮ ಬಿರಾದಾರ, ಮೀನಾ ಪಾಟೀಲ್, ಬಿಇಒ ಸಿದ್ದವೀರಯ್ಯ ರುದನೂರ, ಸಿಪಿಐಗಳಾದ ಅಲಿಸಾಬ್, ಕೃಷ್ಣಕುಮಾರ ಪಾಟೀಲ್, ಪಿಎಸ್‌ಐ ಚಂದ್ರಶೇಖರ, ಎಇಇ ರಮೇಶ ಪಾಟೀಲ್, ಸಮನ್ವಯಾಧಿಕಾರಿ ಪ್ರಭಾಕರ ಕಳಮಾಸೆ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಂಜುಕುಮಾರ ಕಾಂಗೆ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ರಾಜಕುಮಾರ ಬಿರಾದಾರ ಇದ್ದರು.
ಸಂಘದ ಖಜಾಂಚಿ ಮದನ್ ಪಾಟೀಲ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಬಾಲಕೃಷ್ಣ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಚವ್ಹಾಣ್ ಹಾಗೂ ದತ್ತಾ ಪವಾರ್ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ೧೮೦ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜಮಾತಾ ಜೀಜಾವು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಬಸವಕಲ್ಯಾಣದಲ್ಲಿ ಉದ್ದೇಶಿತ ಶಿವಸೃಷ್ಟಿ ನಿರ್ಮಾಣಕ್ಕಾಗಿ ೬೫೦-೭೦೦ ಕೋಟಿ ಅನುದಾನ ಸರ್ಕಾರ ಮಂಜೂರು ಮಾಡಬೇಕು. ಈ ಕುರಿತು ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವೆ.
| ಶರಣು ಸಲಗರ ಶಾಸಕ
ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮರಾಠಾ ನೌಕರರ ಸಂಘದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಘದಿಂದ ರಚನಾತ್ಮಕ ಕಾರ್ಯಚಟುವಟಿಕೆ ನಡೆಸಲು ಯೋಜನೆ ರೂಪಿಸಲಾಗುವುದು.
| ಮಹೇಶ ಮುಳೆ ತಾಲೂಕು ಅಧ್ಯಕ್ಷ, ಕರ್ನಾಟಕ ಮರಾಠಾ ನೌಕರರ ಸಂಘ