ಉತ್ತಮ ಸಮಾಜಕ್ಕೆ ವಚನಗಳಲ್ಲಿದೆ ಸಂದೇಶ

CTD 26 Nruthya
Published on

ಚಿತ್ರದುರ್ಗ: ಉತ್ತಮ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರ ವಚನಗಳಲ್ಲೇ ಸಂದೇಶವಿದ್ದು, ಅದರಂತೆ ನಡೆಯಲು ಮುಂದಾಗಬೇಕಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.


ತರಾಸು ರಂಗಮಂದಿರದಲ್ಲಿ ಶನಿವಾರ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘದ ತಂಡದಿಂದ ನಡೆದ ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನ ಬಸವಣ್ಣ ಅವರ ವಚನ ಆಧರಿಸಿದ ನೃತ್ಯ ರೂಪಕದ ನೇತೃತ್ವ ವಹಿಸಿ ಮಾತನಾಡಿದರು.


ಜಗತ್ತು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದರು ಮಾನವೀಯ ಮೌಲ್ಯ ಕುಸಿಯುತ್ತಿದೆ. ಎಲ್ಲ ಕ್ಷೇತ್ರಗಳೂ ಕೊಳಕಾಗುತ್ತಿವೆ. ಅವನ್ನು ತೊಲಗಿಸಲು ವಚನಗಳಿಂದ ಸಾಧ್ಯವಿದೆ. ಜನಪ್ರತಿನಿಧಿಗಳ ತತ್ವಾದರ್ಶ ಭಾಷಣಕ್ಕೆ ಸೀಮಿತವಾಗಿದ್ದು, ನುಡಿದಂತೆ ನಡೆಯುತ್ತಿಲ್ಲ ಎಂದು ಬೇಸರಿಸಿದರು.


ಪರಿವರ್ತನೆ ಉದ್ದೇಶದೊಂದಿಗೆ ಬಸವಾದಿ ಶರಣರ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದು, ಜನರಲ್ಲಿ ವಚನಗಳ ಅರಿವು ಮೂಡಿಸಲು 44 ಆಯ್ಕೆ ಮಾಡಿಕೊಂಡು, ನೃತ್ಯ ರೂಪಕದ ಮೂಲಕ ಉಣಬಡಿಸಲಾಗುತ್ತಿದೆ. ಇದರ ಹಿಂದೆ ಅನೇಕರ ಪರಿಶ್ರಮ ಇದೆ ಎಂದರು.


ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಗುರು, ಲಿಂಗ, ಜಂಗಮ ಯಾರೇ ಆದರೂ ಕಾಯಕಕ್ಕೆ ಹೆಚ್ಚು ಮಹತ್ವ ನೀಡಬೇಕು. ಒತ್ತಡದಿಂದ ಮುಕ್ತರಾಗಲು ಲಿಂಗ ಪೂಜೆ ಮಾಡಬೇಕು. ಮಾನವೀಯತೆ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದ್ದು, ಪರೋಪಕಾರಿಗಳಾಗಬೇಕು. ಮನೆ-ಮನೆಗೂ ಬಸವ ತತ್ವದ ಅರಿವು ಮೂಡಿಸುವ ಮೂಲಕ ಸಮ ಸಮಾಜಕ್ಕಾಗಿ ಸಾಣೇಹಳ್ಳಿ, ಮುರುಘಾಮಠಗಳೆರಡು ಶ್ರಮಿಸುತ್ತಿವೆ ಎಂದು ಹೇಳಿದರು.


ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ತತ್ವ, ಸಿದ್ಧಾಂತ, ವಚನಗಳನ್ನು ದೇಶಕ್ಕೆ ಪಸರಿಸುವ ಕಾರ್ಯ ಸಾಣೇಹಳ್ಳಿ ಶ್ರೀ ಮಾಡುತ್ತಿದ್ದಾರೆ. ಹಿಂದಿಗೆ ಭಾಷಾಂತರಿಸಿ ಉತ್ತರ ಭಾರತದ ಜನರಿಗೂ ಮುಟ್ಟಿಸುವ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಬಿ.ಎಸ್‌.ರೇಖಾ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಕಸಾಪ ಜಿಲ್ಲಾ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಿರ್ಗಮಿತ ಎಸ್‌ಪಿ ಕೆ.ಪರಶುರಾಮ್‌, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಇತರರಿದ್ದರು.


ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ರಂಗಸೌರಭ ಕಲಾ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net