ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರ ತತ್ವಗಳು ಅವಶ್ಯಕ

WhatsApp Image 2023-02-20 at 6.57.04 PM
ಪಿರಿಯಾಪಟ್ಟಣದ ರಾವಂದೂರು ಗ್ರಾಮದಲ್ಲಿ ಮುರುಘಾ ಮಠದ ವತಿಯಿಂದ ಸೋಮವಾರ ಆಯೋಜಿಸಿದ್ದ ಬಸವತತ್ವ ಸಮಾವೇಶವನ್ನು ಮೋಕ್ಷಪತಿ ಸ್ವಾಮೀಜಿ ಉದ್ಘಾಟಿಸಿದರು. ಕೆ.ಪಿ. ಚಂದ್ರಶೇಖರ್, ಆರ್. ರಾಜಶೇಖರ್, ಆರ್.ವಿ. ಶಿವಮೂರ್ತಿ, ಆರ್.ಟಿ. ಸತೀಶ್, ಶಿವಯೋಗಿ, ಆರ್. ಶಶಿಧರ್, ಆರ್.ಎಸ್. ಸುರೇಶ್ ಇತರರಿದ್ದರು.
Published on

ರಾವಂದೂರು: ಇಂದಿನ ಸಮಾಜದಲ್ಲಿ ಉಂಟಾಗಿರುವ ಅನೇಕ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಉತ್ತರವಿದೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಬಸವಾದಿ ಶರಣರ ತತ್ವಗಳು ಅವಶ್ಯಕ ಎಂದು ಮೈಸೂರಿನ ಮಹಾರಾಜ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಟಿ.ಕೆ. ಕೆಂಪೇಗೌಡ ತಿಳಿಸಿದರು.

ಪಿರಿಯಾಪಟ್ಟಣದ ರಾವಂದೂರು ಗ್ರಾಮದಲ್ಲಿ ಮುರುಘಾ ಮಠದ ವತಿಯಿಂದ ಸೋಮವಾರ ಆಯೋಜಿಸಿದ್ದ ಬಸವತತ್ವ ಸಮಾವೇಶದಲ್ಲಿ ಭವಸಾಗರದಲ್ಲಿ ವಚನ ಸಾಹಿತ್ಯದ ಚಿಕಿತ್ಸೆ ಕಥೆ ಎಂಬ ವಿಚಾರವಾಗಿ ಮಾತನಾಡಿದರು.

ನಮ್ಮೊಳಗೆ ಮತ್ತು ಸಮಾಜದಲ್ಲಿ ಸಾಮರಸ್ಯ, ಕೋಮು-ಭಾವನೆಗಳು ಮುಂತಾದ ಆತಂಕದ ವಿಚಾರಗಳು ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ವಚನ ಸಾಹಿತ್ಯ ಮಾತ್ರ ಶಾಂತಿ ಮತ್ತು ಸಾಮರಸ್ಯ ನೀಡಬಲ್ಲವು. ದಿನಕ್ಕೊಂದು ವಚನ ಓದಿ ಅರ್ಥ ಮಾಡಿಕೊಂಡರೆ ಸಾಕು ಜೀವಿತ ಕಾಲದಲ್ಲಿ ಆನಂದಮಯವಾಗಿ ಜೀವಿಸಬಹುದು. ವಚನಗಳು ಕೇವಲ ತಿಳಿವಳಿಕೆ ನೀಡುವುದಷ್ಟೇ ಅಲ್ಲದೆ ವೈಚಾರಿಕತೆ ಮತ್ತು ವಿಜ್ಞಾನದ ವಿಚಾರಗಳನ್ನು ತಿಳಿಸಿ ಬದುಕಿಗೆ ದಾರಿದೀಪವಾಗಲಿವೆ ಎಂದು ತಿಳಿಸಿದರು.

ರಾವಂದೂರು ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗಗಳನ್ನು ನಾವು ಸದಾ ನೆನೆಯಬೇಕು. ಯಾವುದೇ ಸ್ವಾರ್ಥವಿಲ್ಲದೆ ಮಾಡಿದ ಸೇವೆಗೆ ಭಗವಂತ ಉತ್ತಮವಾದುದ್ದನ್ನು ಕೊಡುತ್ತಾನೆ. ಹಾಗಾಗಿ ಪ್ರತಿಯೊಬ್ಬರೂ ಕರ್ತವ್ಯವನ್ನಷ್ಟೇ ಮಾಡಬೇಕು. ಫಲವನ್ನು ಬಗವಂತನಿಗೆ ಅರ್ಪಣೆ ಮಾಡಬೇಕು ಎಂದು ತಿಳಿಸಿದರು.

ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಪಿ.ಚಂದ್ರಶೇಖರ್ ಮಾತನಾಡಿದರು. ಸಮಾರಂಭದಲ್ಲಿ ಕಲ್ಲಹಳ್ಳಿ ವಿರಕ್ತ ಮಠದ ರುದ್ರಮುನಿ ಸ್ವಾಮೀಜಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಶರಣ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎ.ಟಿ. ವಿರೂಪಾಕ್ಷ, ಬಸವ ಕೇಂದ್ರ ಮಂಚಿಬೀಡು ಅಧ್ಯಕ್ಷ ಆರ್. ರಾಜಶೇಖರ್, ರಾವಂದೂರು ವೀರಶೈವ ಮುಖಂಡರಾದ ಆರ್.ವಿ. ಶಿವಮೂರ್ತಿ, ಎಚ್.ಆರ್. ರಾಜಶೇಖರ್, ಆರ್.ಟಿ. ಸತೀಶ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಯೋಗಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್‌ಕುಮಾರ್, ಆರ್.ಆರ್. ಶಶಿಧರ್, ಆರ್.ಎಸ್. ಸುರೇಶ್, ಆರ್.ಎಸ್. ಮಹೇಶ್, ಆರ್.ವಿ. ವಿಶ್ವನಾಥ್, ನಟರಾಜ್, ಲಲಿತಾ, ತಾರಾದೇವಿ, ಸರ್ವಮ್ಮ, ಲತಾ ಹಾಜರಿದ್ದರು.
ಕಾರ್ಯಕ್ರಮದ ಅಂಗವಾಗಿ ಊಟಿಯ ಗುರುಬಸವ ಜಯಂತಿ ನಿಕೇತನ ಭಜನಾ ಮಂಡಳಿಯಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net