

ಸಂಕೇಶ್ವರ: ಇಂದಿನ ಕಂಪ್ಯೂಟರ ಯುಗದಲ್ಲಿ ಮನುಷ್ಯನ ಮಾನಸಿಕ ನೆಮ್ಮದಿ ಮಾಯವಾಗುತ್ತಿದೆ. ಮಠಗಳು ದಾನ-ಧರ್ಮ, ಒಳಿತು-ಕೆಡಕನ್ನು ಎತ್ತಿತೋರುವ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ಕೊಂಡಿಯಾಗಿವೆ ಎಂದು ಮಂಗಳೂರು ರಾಮಕೃಷ್ಣಾಶ್ರಮದ ಸ್ವಾಮಿ ಏಕಗಮ್ಯಾನಂದಜೀ ಹೇಳಿದರು.
ಸಮೀಪದ ನಿಡಸೋಸಿಯಲ್ಲಿ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಂಪ್ಯೂಟರ್ ಯುಗದಲ್ಲಿ ಮಠಗಳ ಅವಶ್ಯಕತೆ ಎಂಬ ಕುರಿತು ಚಿಂತನ ಮಂಥನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಬದುಕಿನಲ್ಲಿ ಮರೆಯಾಗುತ್ತಿರವ ಮೌಲ್ಯಗಳ ಪುನಶ್ಚೇತನಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳು ಬಹುದೊಡ್ಡ ಆಧಾರ ಒದಗಿಸುತ್ತವೆ ಎಂದರು.
ಸಾನ್ನಿಧ್ಯವಹಿಸಿದ್ದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಇಂದಿನ ಯುವಕರು ಬದುಕಿನ ಮೌಲ್ಯಗಳನ್ನು ತೊರೆಯುತ್ತಿದ್ದು, ಸುಂದರ ಬದುಕಿನ ನಿರ್ಮಾಣಕ್ಕೆ ಧಾರ್ಮಿಕ, ಆಧ್ಯಾತ್ಮಿಕತೆ ಬಹುದೊಡ್ಡ ಆಯಾಮ ಒದಗಿಸಬಲ್ಲ ಶಕ್ತಿಹೊಂದಿವೆ. ಶಾಂತಿ-ಸಮಾಧಾನ, ಬದುಕಿನ ನೆಮ್ಮದಿಗಾಗಿ ದಾನ-ಧರ್ಮ, ಸಂಸ್ಕೃತಿ-ಸಂಸ್ಕಾರಗಳ ಬಗೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಇಂದು ಎಲ್ಲ ಕ್ಷೇತ್ರಗಳಲ್ಲಿ ತಾಂತ್ರಿಕತೆ ಬೆಳೆಯುತ್ತ ಸಾಗಿರುವ ಪರಿಣಾಮ ಸಂಬಂಧಗಳು ಮಾಯವಾಗುತ್ತಿದ್ದು, ಮಠಗಳಿಂದ ಸಮಾಜದಲ್ಲಿ ಪಾವಿತ್ರ್ಯತೆ ಉಳಿಯಲು ಸಾಧ್ಯವಿದೆ ಎಂದರು.ಘಟಪ್ರಭಾ ಗುಬ್ಬಲಗುಡ್ಡದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಜಡೆಮಠದ ಡಾ.ಮಹಾಂತ ಸ್ವಾಮೀಜಿ, ಡಾ.ಮಹಾಂತ ಪ್ರಭುಸ್ವಾಮೀಜಿ, ಕಾರಂಜಿಮಠದ ಡಾ. ಶಿವಯೋಗಿ ದೇವರು, ಮಾಡಾಳ ರುದ್ರಮುನಿ ಸ್ವಾಮೀಜಿ, ಶಿವಮೂರ್ತಿ ಸ್ವಾಮೀಜಿ, ಡಾ. ವಿವೇಕಾನಂದ ದೇವರು ಇತರರಿದ್ದರು.