ಉತ್ತಮ ಶಿಕ್ಷಣ ಪಡೆದು ಪಾಲಕರು ಕನಸು ನನಸಾಗಿಸಿ

2mh1
ಮಾದನಹಿಪ್ಪರಗಿಯ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ಬಸವರಾಜ ಭಾಗಾ ಮಾತನಾಡಿದರು. ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಗುರುನಾಥ ಸೊನ್ನದ್, ಡಾ ಬಸವಂತರಾವ ಪಾಟೀಲ್ ಇದ್ದರು.
Published on

ಮಾದನಹಿಪ್ಪರಗಿ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹೆತ್ತವರು ಸಾಕಷ್ಟು ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ವ್ಯಕ್ತಿಗಳಾಗಿ ಪಾಲಕರನ್ನು ಖುಷಿಯಾಗಿಡಬೇಕು ಎಂದು ಕಲಬುರಗಿ ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಸವರಾಜ ಭಾಗಾ ಹೇಳಿದರು.

ಶಿವಲಿಂಗೇಶ್ವರ ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್ ಇಂಟಲಿಜೆನ್ಸ್) ಯುಗ ಆರಂಭವಾಗಿದೆ. ಮಾನವ ನಿರ್ಮಿತ ಕೌಶಲದ ದಿನಗಳು ಕಾಣೆಯಾಗುವ ಸಮಯದಲ್ಲಿ ವಿದ್ಯಾರ್ಥಿಗಳು ಕಠಿಣ ಶ್ರಮಪಟ್ಟರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಸತತ ಆಧ್ಯಯನವೇ ನಿಮಗೆ ಆಧಾರವಾಗಲಿದೆ. ಕಾಲಹರಣ ಮಾಡದೆ ನಿಮ್ಮ ಜೀವನ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಿವಲಿಂಗೇಶ್ವರ ಮಠದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ಮಾತನಾಡಿ, ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಸಾಧಿಸುವ ಛಲ ನಿಮ್ಮೆಲ್ಲರಲ್ಲಿ ಬರಲಿ, ಸರಿಯಾಗಿ ಓದಿ ಉನ್ನತ ಉದ್ದೆ ಪಡೆದು ಹೆತ್ತವರು, ಊರು ಹಾಗೂ ನಾಡಿಗೂ ಒಳ್ಳೆಯ ಕೀರ್ತಿ ತನ್ನಿ ಎಂದು ಆಶೀರ್ವದಿಸಿದರು.

ಪ್ರಾಂಶುಪಾಲ ಡಾ.ಬಸವಂತರಾವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗುರುನಾಥ ಸೊನ್ನದ್, ಪ್ರೊ.ಪರಶುರಾಮ ಚವ್ಹಾಣ್, ಬಸಪ್ಪ ಹರಿಜನ, ಡಾ.ಶ್ರವಣ ಕಾಂಬಳೆ, ಪ್ರೊ.ಶಿವಕುಮಾರ, ಡಾ.ಶಂಕರ ಸೂರೆ, ಡಾ.ಪ್ರತಿಭಾ, ಪ್ರೊ.ಇಂದಿರಮ್ಮ, ಪ್ರೊ.ವಿಜಯಲಕ್ಷ್ಮೀ ಆಗ್ರೆ, ಡಾ.ಲಿಂಗನಬಸವ ಪಾಟೀಲ್ ಇತರರಿದ್ದರು.

ರಂಜಿತಾ ಚಿಂಚೋಳಿ ಪ್ರಾರ್ಥಿಸಿದರು. ಮೋನಿಕಾ ಸಲಗರ ಸ್ವಾಗತಿಸಿದರು. ಪ್ರೊ. ವಿಜಯಲಕ್ಷ್ಮೀ ಕುಂಬಾರ ನಿರೂಪಣೆ ಮಾಡಿದರು. ವಿದ್ಯಾರ್ಥಿನಿ ಅನಿತಾ ದೇಗಾಂವಗೆ ೨೦೨೪-೨೫ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net