

ಐನಾಪುರ: ಭಕ್ತಿ, ಜ್ಞಾನ, ವೈರಾಗ್ಯ ಮೈಗೂಡಿಸಿಕೊಂಡರೆ ಇಡೀ ಜಗತ್ತು ಮನೆಯಾಗುತ್ತದೆ. ವಸುದೇವ ಕುಟುಂಬಕಂ ಪಡೆಯಬೇಕಾದರೆ ಸತ್ಸಂಗ ಹಾಗೂ ಗುರುವಿನ ನಿರಂತರ ಸಂಪರ್ಕದಿಂದ ಸಾಧ್ಯ ಎಂದು ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ನುಡಿದರು.
ಗ್ರಾಮದ ಕೃಷ್ಣಾಕಿತ್ತೂರ ಆಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಶ್ರೀಗಳ ಅಮೃತ ಮಹೋತ್ಸವ ಹಾಗೂ ಬಸವೇಶ್ವರ ಶ್ರೀಗಳ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ವೈರಾಗ್ಯ ಗೋಷ್ಠಿಯಲ್ಲಿ ಆಶೀರ್ವಚನ ನೀಡಿದರು.
ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ಮಾಡಬೇಕು. ಮೊಬೈಲ್ ಗೀಳಿಗೆ ಬೀಳದಂತೆ ನಿಗಾ ವಹಿಸಬೇಕು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿ ಮಾಡಿ. ಇವರು ಮನೆತನಕ್ಕಷ್ಟೇ ಅಲ್ಲದೆ ಇಡೀ ದೇಶಕ್ಕೆ ಆಸ್ತಿಯಾಗುತ್ತಾರೆ ಎಂದರು.
ಗೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಮಾತನಾಡಿ, ಗುರು-ಶಿಷ್ಯರ ಸಂಬಂಧ ಪವಿತ್ರವಾದದು, ನಡೆದಾಡುವ ದೇವರೆನಿಸಿಕೊಂಡಿರುವ ಸಿದ್ದೇಶ್ವರ ಶ್ರೀಗಳ ಕರುಣೆ ವೈರಾಗ್ಯಮೂರ್ತಿ ಬಸವೇಶ್ವರ ಶ್ರೀಗಳ ಮೇಲಿದೆ. ಇವರ ಸಂಸ್ಕಾರದಿಂದ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ಹೆಮ್ಮೆ ಎಂದರು.
ಬಸವೇಶ್ವರ ಸ್ವಾಮೀಜಿ ತುಲಾಭಾರ ಮಾಡಲಾಯಿತು. ಕೆಂಪವಾಡದ ಸಕ್ಕರೆ ಕಾರ್ಖಾನೆ ಎಂಡಿ ಶ್ರೀನಿವಾಸ ಪಾಟೀಲ, ವಿವೇಕ ಜತ್ತಿ, ಶ್ರೀಶೈಲ ಯಡಹಳ್ಳಿ ಮಾತನಾಡಿದರು. ಮಲ್ಲಿಕಾರ್ಜುನ ಬುರ್ಕೆ ಸಂಗಡಿಗರಿಂದ ಸಂಗೀತ ಸೇವೆ ನೆರವೇರಿತು. ಗೀತಾ ಮೊಕಾಸಿ, ಮಹಾದೇವಿ ಬೆಳಗಲಿ, ಸುಜಾತಾ ಕಮತೆ ಇತರರು ಇದ್ದರು. ಶಿವಗೌಡ ಚೌಗುಲಾ ನಿರೂಪಿಸಿದರು.