

ಹುಮನಾಬಾದ್: ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶ್ರಮ ಮತ್ತು ಶಿಸ್ತು ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡಲ್ಲಿ ಗುರಿ ಸಾಧನೆ ಸರಳವಾಗಲಿದೆ ಎಂದು ರಾಷ್ಟ್ರಮಟ್ಟದ ಪ್ರೇರಣಾ ಭಾಷಣಕಾರ ಡಾ.ಪೃಥ್ವಿರಾಜ ಲಕ್ಕಿ ಹೇಳಿದರು.
ಸರ್ಕಾರದ ವಿನೂತನ ಪ್ರೇರಣಾ ಯೋಜನೆ ಹಾಗೂ ಐಕ್ಯೂಎಸಿ ಸಹಯೋಗದಡಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಮಾರ್ಗದರ್ಶನ ಕೊರತೆಯಿಂದ ಗುರಿ ಹೊಂದಿ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದರು.
ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಆದರ್ಶ, ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ ಸನ್ನಿವೇಶಗಳೊಂದಿಗೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪರತೆ, ಪರೋಪಕಾರ ಬುದ್ಧಿ, ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಲು ವ್ಯಕ್ತಿತ್ವ ಪೂರಕವಾಗಿದೆ. ಹೂವಿಗೆ ಪರಿಮಳ ಎಷ್ಟು ಮುಖ್ಯವೋ, ಮಾನವರಿಗೆ ವ್ಯಕ್ತಿತ್ವವೂ ಅಷ್ಟೇ ಮುಖ್ಯ ಎಂದು ತಿಳಿಹೇಳಿದರು.
ಪ್ರೇರಣಾ ಕೋಶದ ಸಂಚಾಲಕ ಡಾ.ಅರುಣಕುಮಾರ ಚಂದನ್ ಪ್ರಾಸ್ತಾವಿಕ ಮಾತನಾಡಿ, ಪ್ರೇರಣಾ ೨೦೨೪-೨೫ರ ಆಯವ್ಯಯ ಭಾಷಣದಲ್ಲಿ ಉದ್ಘೋಷಣೆಗೊಂಡ ಒಂದು ಸುವ್ಯವಸ್ಥಿತ ಮೆಂಟರ್‌ಶಿಪ್ ಉಪಕ್ರಮ. ಇದರಡಿ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ಮತ್ತು ಗೌರವಾರ್ಥ ಸೇವೆಯಾಗಿ ವಿಶೇಷ ಉಪನ್ಯಾಸ, ಕಾರ್ಯಾಗಾರ, ಕೌಶಲ ತರಬೇತಿ, ಕ್ಷೇತ್ರ ಭೇಟಿ ಇತ್ಯಾದಿ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ, ಮಾರ್ಗದರ್ಶನ, ಜ್ಞಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಅಪರ್ಣಾ ಶೆಟ್ಟಿ ಮಾತನಾಡಿ, ಪ್ರೇರಣಾ ಅಡಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಡಾ.ಸಚಿನ್ ಕುಲಕರ್ಣಿ, ಡಾ.ಮಲ್ಲಿಕಾರ್ಜುನ ಬಾಳಿ, ಡಾ.ಶಾಂತಕುಮಾರ ಬಾಣಗುಡಿ, ಗೌರಮ್ಮ, ತರನ್ನುಮ್ ಇತರರಿದ್ದರು. ಡಾ.ನಂದಾ ವಾರದ ಸ್ವಾಗತಿಸಿದರು. ಶಿವಶರಣಪ್ಪ ವಂದಿಸಿದರು. ಪೆದ್ದಪ್ಪ ನಾಯಕ ನಿರೂಪಣೆ ಮಾಡಿದರು.