

ಮೈಸೂರು: ವೃತ್ತಿ ಜೀವನದಲ್ಲಿ ಮಾನವೀಯ ಮೌಲ್ಯ, ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಮೀಸಲು ಪೊಲೀಸ್ ವಿಭಾಗದ ಮಹಾನಿರೀಕ್ಷಕ ಸಂದೀಪ್ ಪಾಟೀಲ್ ಹೇಳಿದರು.
ಸುತ್ತೂರಿನ ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಆಯೋಜಿಸಿದ್ದ ಶ್ರಾವಣ ಮಾಸ ಪ್ರವಚನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಜೀವನ ಒತ್ತಡದಿಂದ ಕೂಡಿದ್ದು, ಇದರಿಂದ ಹೊರಬರಲು ಶ್ರೀಮಠ ಶ್ರಾವಣ ಮಾಸ ಪ್ರವಚನದಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ನಾವು ಜೀವನದಲ್ಲಿ ಮಾಡುವ ಒಳ್ಳೆಯ ಕೆಲಸಗಳಿಂದ ನಮಗೆ ಒಳ್ಳೆಯದಾಗುತ್ತದೆ ಎಂದರು.
ಸುತ್ತೂರು ಮಠ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ ನೀಡಿ ಒಳ್ಳೆಯ ಚಾರಿತ್ರ್ಯವುಳ್ಳವರನ್ನಾಗಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದು ನುಡಿದರು.
ಮಳವಳ್ಳಿ ತಾಲೂಕಿನ ಕುಂದೂರುಬೆಟ್ಟದ ಶ್ರೀ ನಂಜುಂಡ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲೇ ಅನುಭವ ಮಂಟಪದ ಬಸವಣ್ಣ, ಅಲ್ಲಮಪ್ರಭುಗಳು ಮೊದಲಾದ ಶರಣರು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಶ್ರೀಮಠ ಇಂತಹ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ಸುತ್ತೂರು ಮಠ ಆಧ್ಯಾತ್ಮಿಕ ಕೇಂದ್ರವಾಗಿದ್ದು, ಒತ್ತಡದಲ್ಲಿ ಪುಣ್ಯ ಕ್ಷೇತ್ರಕ್ಕೆ ಆಗಮಿಸುವವರಿಗೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ. ಶ್ರಾವಣ ಮಾಸ ಅತ್ಯಂತ ಶ್ರೇಷ್ಠ ಮತ್ತು ಪವಿತ್ರ ಮಾಸವಾಗಿದೆ. ಈ ದಿನಗಳಲ್ಲಿ ಪ್ರವಚನಗಳನ್ನು ಆಲಿಸುವುದರಿಂದ ಜ್ಞಾನಾಭಿವೃದ್ಧಿಯಾಗುತ್ತದೆ ಎಂದು ನುಡಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ಡಿ.ಎಸ್.ಸಿದ್ದಲಿಂಗಸ್ವಾಮಿ ಕಾವ್ಯವಾಚನ ಮಾಡಿದರು.