

ಚಿಕ್ಕಬಳ್ಳಾಪುರ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿರುವುದು ಚಿಕ್ಕಬಳ್ಳಾಪುರ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ವಿಷಯ. ಈ ಸಾಧನೆಯನ್ನು ಮುಂದುವರಿಸಲು ಶ್ರಮಿಸುವಂತೆ ವಿಧಾನಪರಿಷತ್ ಸದಸ್ಯ ಚೌಡಾರೆಡ್ಡಿ ತೂಪಲ್ಲಿ ಸಲಹೆ ನೀಡಿದರು.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತರತ್ನರಾದ ಸರ್.ಎಂ.ವಿಶ್ವೇಶ್ವರಯ್ಯ, ಸಿ.ಎನ್.ಆರ್ ರಾವ್ ಮತ್ತು ಶಿಕ್ಷಣ ತಜ್ಞ ಎಚ್.ಎನ್.ನರಸಿಂಹಯ್ಯ ಶ್ರೇಷ್ಠ ವ್ಯಕ್ತಿಗಳು ಜನಿಸಿದ ಜಿಲ್ಲೆ ನಮ್ಮದು. ಅಂತರ್ಜಲ ಸಮಸ್ಯೆ, ಮಳೆ ಕೊರತೆ ನಡುವೆಯೂ ಹಾಲು ಉತ್ಪಾದನೆ, ದ್ರಾಕ್ಷಿ, ಹೂವು ಮತ್ತು ತರಕಾರಿ ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಇದರ ನಡುವೆ ಶೈಕ್ಷಣಿಕ ಹೊಸ ಸಾಧನೆ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ, ಇದಕ್ಕೆಲ್ಲ ಅಧಿಕಾರಿಗಳು, ಶಿಕ್ಷಕರ ಪರಿಶ್ರಮ ಮುಖ್ಯ ಕಾರಣ ಎಂದರು.
ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಬಿ.ಫೌಜೀಯಾ ತರನ್ನುಮ್, ಡಿಡಿಪಿಐ ಎಸ್.ಜಿ.ನಾಗೇಶ್‌ರನ್ನು ಸನ್ಮಾನಿಸಲಾಯಿತು. ಪಶು ವೈದ್ಯಕೀಯ ವಹಾವಿದ್ಯಾಲಯ ಸೆನೆಟ್ ಸದಸ್ಯ ಶಂಕರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಲಿಂಗಯ್ಯ, ಮುನಿರಾಜು, ಶಿಕ್ಷಕರಾದ ಎಚ್.ಎನ್.ನಾರಾಯಣಸ್ವಾಮಿ, ಮಾರುತಿ, ಶ್ರೀನಿವಾಸ್, ಅಮರ್, ಶಿವಣ್ಣ ಇತರರಿದ್ದರು.