

ಬೀದರ್: ಉತ್ತಮ ಮಳೆ ಮತ್ತು ಬೆಳೆಗಾಗಿ ಪ್ರಾರ್ಥಿಸಿ ಸಿರ್ಸಿ (ಎ) ಗ್ರಾಮದಲ್ಲಿ ಬುಟ್ಟಿ ಜಾತ್ರೆ ನಡೆಯಿತು. ಜಾತಿ, ಮತ, ಧರ್ಮ ಎನ್ನದೆ ಗ್ರಾಮದ ಪ್ರತಿಯೊಂದು ಕುಟುಂಬ ಪಾಲ್ಗೊಂಡಿದ್ದು ವಿಶೇಷವೆನಿಸಿತು.
ತಲೆ ಮೇಲೆ ಬುಟ್ಟಿ ಇಟ್ಟುಕೊಂಡು ಭಜನೆ, ಕೀರ್ತನೆ ಮಾಡುತ್ತ ಊರ ಹೊರವಲಯದ ಗುಡ್ಡದಲ್ಲಿನ ಶ್ರೀ ಸಿದ್ದೇಶ್ವರ ದೇವಸ್ಥಾನವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಜಾತ್ರೆ ಮಾಡಲಾಯಿತು. ಬುಟ್ಟಿ ಜಾತ್ರೆ ಮಾಡಿದರೆ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆಯಿಂದ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.
ಹೋಳಿಗೆ, ಹಾಲು, ತುಪ್ಪ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಹಿಂಡಿ, ವಿವಿಧ ಪಲ್ಯ, ಚಿತ್ರಾನ್ನ, ಬಿಳಿ ಅನ್ನ ಸೇರಿ ವಿವಿಧ ಭಕ್ಷ್ಯಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಮಾಡಿಕೊಂಡು ಬುಟ್ಟಿಯಲ್ಲಿ ಹೊತ್ತು ತಂದಿದ್ದ ಮಹಿಳೆಯರು ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ಪರಸ್ಪರ ಹಂಚಿಕೊಂಡು ಊಟ ಮಾಡಿದರು. ಜಾತ್ರೆ ನೋಡಲೆಂದು ವಿವಿಧ ಹಳ್ಳಿಗಳಿಂದ ಬಂದ ಜನರು ಸಹ ಊಟದ ರುಚಿ ನೋಡಿದರು.
ಪ್ರಮುಖರಾದ ಅಡೆಪ್ಪ ಶೇರಿಕಾರ, ವೀರಶೆಟ್ಟಿ ಬಿರಾದಾರ್, ಲಾಲಪ್ಪ ಹಳ್ಳಿಖೇಡ್, ಪುಂಡಲೀಕ ಡುಬಾಕ್, ರವಿ ನಾಗನಕೇರಾ, ಶಿವರಾಜ ಜಾಣಿ, ನರಸಪ್ಪ ಹೊನ್ನಡ್ಡಿ, ಗುಂಡಪ್ಪ ನಿಂಬೂರ, ರಾಕೇಶ್ ಹುಮನಾಬಾದೆ, ಶರಣು ಸಿದ್ದಾ, ನಾಗೇಶ ಸಿದ್ದಾ ಇತರರಿದ್ದರು. ಊಟದ ನಂತರ ಮಕ್ಕಳು ಕಬಡ್ಡಿ, ಲಗೋರಿ, ಕಣ್ಣಾಮುಚ್ಚಾಲೆ, ಧಪ್ಪಂಧುಪ್ಪಿ (ಚೆಂಡಿನ ಆಟ), ಆಣೆಕಲ್ಲು ಇತರ ದೇಸಿ ಆಟಗಳನ್ನು ಆಡಿ ಸಂಭ್ರಮಿದರು.