ಉತ್ತಮ ಬದುಕಿಗೆ ಸ್ವಾಸ್ಥ್ಯ ಮನಸ್ಸು ಮುಖ್ಯ

web-_2__2
ಹೊಸಪೇಟೆಯ ಕನ್ನಡ ವಿವಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಯೋಜಿಸಿದ್ದ ಸ್ವಾಸ್ಥ್ಯ ಬದುಕಿನ ಸೂತ್ರಗಳು ವಿಷಯ ಕುರಿತ ಒಂದು ದಿನದ ತಿಳಿವಳಿಕೆ ಶಿಬಿರವನ್ನು ಡಾ.ಸಿ.ಆರ್. ಚಂದ್ರಶೇಖರ್ ಉದ್ಘಾಟಿಸಿದರು. ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಎನ್‌ಎಸ್‌ಎಸ್ ಸಂಚಾಲಕ ಡಾ. ಅಮರೇಶ ಯತಗಲ್, ಡಾ.ವೀರೇಶ ಬಡಿಗೇರ ಇದ್ದರು.
Published on

ಹೊಸಪೇಟೆ: ಆರೋಗ್ಯ ಎಂಬುದು ಸಕಲ ಭಾಗ್ಯಗಳಿಗಿಂತ ಮಿಗಿಲು. ದೇಹ, ಮನಸ್ಸು, ಇಂದ್ರಿಯ ಮತ್ತು ಆತ್ಮಪ್ರಸನ್ನತೆಯಿಂದ ಸರ್ವವನ್ನೂ ಸಾಧಿಸಲು ಸಾಧ್ಯ ಎಂದು ಹಿರಿಯ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.


ಕನ್ನಡ ವಿವಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಸ್ವಾಸ್ಥ್ಯ ಬದುಕಿನ ಸೂತ್ರಗಳು ವಿಷಯ ಕುರಿತು ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಒಂದು ದಿನದ ತಿಳಿವಳಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಮನುಷ್ಯನ ಎಲ್ಲ ಚಟುವಟಿಕೆಗೆ ಮನಸ್ಸೇ ಮೂಲ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಾವೇ ಸಂಪಾದಿಸಬೇಕು. ಪೌಷ್ಟಿಕ ಆಹಾರ ಸೇವನೆ, ಧ್ಯಾನ, ವ್ಯಾಯಾಮ, ಶಿಸ್ತುಬದ್ಧ ಜೀವನ ಶೈಲಿ ರೂಢಿಸಿಕೊಳ್ಳುವುದು ಅಗತ್ಯ ಎಂದರು.


ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ವ್ಯಕ್ತಿತ್ವ ರೂಪಿಸುವಲ್ಲಿ ಮನಸ್ಸಿನ ಪಾತ್ರ ಹಿರಿದು. ಒಂದೊಂದು ಮನಸ್ಸು ಒಂದು ಸಮುದ್ರ. ಸಮಾಜದಲ್ಲಿ ಎಷ್ಟು ಜನರಿದ್ದಾರೆ ಅಷ್ಟು ವಿಭಿನ್ನ ರೀತಿಯ ಮನಸ್ಸುಗಳಿರುತ್ತವೆ. ಬದುಕಿನಲ್ಲಿ ತಿಳಿದೋ ತಿಳಿಯದೆಯೋ ಹಲವಾರು ಚಟಗಳಿಗೆ ಬಲಿಯಾಗಿರುತ್ತೇವೆ. ಅವುಗಳಿಂದ ಹೊರಬಂದು ಉತ್ತಮ ಆರೋಗ್ಯ ಹೊಂದಬೇಕಿದೆ. ಮುಂದಿನ ಪೀಳಿಗೆಯನ್ನು ಸ್ವಸ್ಥವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net