

ಬೇಲೂರು: ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಅದಕ್ಕೆ ಶಿಕ್ಷಣದ ಪಾತ್ರ ಮಹತ್ತರದ್ದಾಗಿದೆ. ಅದರಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನ ಮಟ್ಟವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎಚ್.ಕೆ.ಸುರೇಶ್ ಅಭಿಪ್ರಾಯಪಟ್ಟರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ ನೂರರಷ್ಟು ಫಲಿತಾಂಶಕ್ಕೆ ಶ್ರಮಿಸಿದ ಶಾಲಾ ಶಿಕ್ಷಕರು ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪಟ್ಟಣದ ಶ್ರೀ ಶಿವನಂಜುಂಡೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಸನ್ಮಾನಿಸಿ ಮಾತನಾಡಿದರು.
ಮುಂದಿನ ಬಾರಿಯೂ ಇದಕ್ಕಿಂತ ಹೆಚ್ಚಿನ ಫಲಿತಾಂಶ ತರುವುದಕ್ಕೆ ಎಲ್ಲ ಶಾಲೆಗಳ ಶಿಕ್ಷಕರು ಇನ್ನಷ್ಟು ಮುತುವರ್ಜಿ ವಹಿಸಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸಿದರೆ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿಯ ಫಲಿತಾಂಶದಲ್ಲಿ ಎಲ್ಲ ಶಿಕ್ಷಕರ ಶ್ರಮ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಫಲಿತಾಂಶದಲ್ಲಿ ಮೇಲ್ಮಟ್ಟದಲ್ಲಿ ಬರುವುದಕ್ಕೆ ಎಲ್ಲ ಶಾಲಾ ಶಿಕ್ಷಕರು ಮುಂದಾಗುವ ಮೂಲಕ ಬೇಲೂರು ವಿಶ್ವದ ಭೂಪಟದಲ್ಲಿ ಹೇಗೆ ಹೆಸರು ಮಾಡಿದೆಯೂ ಹಾಗೆಯೇ 2023-24ನೇ ಸಾಲಿನಲ್ಲೂ ಉತ್ತಮ ಫಲಿತಾಂಶಕ್ಕೆ ಮುಂದಾಗೋಣ. ಇದಕ್ಕೆ ಪ್ರತಿಯೊಬ್ಬ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಸನ್ಮಾನ: 2022-23ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ನೂರಕ್ಕೆ ನೂರಷ್ಟು ಅಂಕ ಪಡೆಯಲು ಶ್ರಮವಹಿಸಿದ 600ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಉತ್ತೀರ್ಣರಾದ 1,836 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಬಿಆರ್‌ಸಿ ಶಿವಮರಿಯಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹೇಮಂತ್, ದೈಹಿಕ ಶಿಕ್ಷಣ ಪರಿವೀಕ್ಷಕ ಪಾಲಾಕ್ಷಮೂರ್ತಿಇತರರಿದ್ದರು.