

ಚಿತ್ರದುರ್ಗ: ಮನಸ್ಸಿಗೆ ನಾಟುವಂತೆ ಬೋಧಿಸುವ ಮೂಲಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಡಿಡಿಪಿಐ ಎಂ.ಆರ್. ಮಂಜುನಾಥ್ ಹೇಳಿದರು.
ಮುಸ್ಲಿಂ ಎಜುಕೇಷನಲ್ ಆ್ಯಂಡ್ ಎಂಪವರ‌್ಮೆಂಟ್ ಟ್ರಸ್ಟ್‌ನಿಂದ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಉರ್ದು ಶಿಕ್ಷಕರಿಗೆ ಅಹಮದ್ ಪ್ಯಾಲೇಸ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವರ್ಣಮಾಲೆ, ಶುದ್ಧ ಬರವಣಿಗೆಯನ್ನು ಮೊದಲು ಮಕ್ಕಳಿಗೆ ಕಲಿಸಬೇಕು. ಕೇಳಿಸಿಕೊಳ್ಳುವುದು, ಮಾತನಾಡುವುದು, ಓದುವುದು, ಬರೆಯುವುದು ಸರಿಯಿದ್ದಾಗ ಗಣಿತ, ಆಂಗ್ಲ, ವಿಜ್ಞಾನ ಭಾಷೆಗಳನ್ನು ಸುಲಭವಾಗಿ ಅರ್ಥಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು. ಟಿವಿ, ಮೊಬೈಲ್‌ಗಳಿಂದ ಮಕ್ಕಳನ್ನು ದೂರವಿರಿಸಬೇಕು. ಮಕ್ಕಳ ಶೈಕ್ಷಣಿಕ ಚಟುವಟಿಕೆ ಬಗ್ಗೆ ಪಾಲಕರು ಹೆಚ್ಚಿನ ನಿಗಾವಹಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್ ಮಾತನಾಡಿ, ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುತ್ತಿದ್ದರೂ ಕಳೆದ ಐದಾರು ವರ್ಷಗಳಿಂದ ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಇದರಿಂದ ಶಿಕ್ಷಕರ ಸಂಖ್ಯೆಯೂ ಸಹಜವಾಗಿ ಕಡಿತಗೊಳ್ಳುತ್ತದೆ ಎಂದರು.
2010ರಲ್ಲಿ ಜಿಲ್ಲೆಯಲ್ಲಿದ್ದ ಐದುನೂರಕ್ಕೂ ಹೆಚ್ಚು ಉರ್ದು ಶಿಕ್ಷಕರ ಸಂಖ್ಯೆಯಲ್ಲಿ ಯಾಕೆ ಕಡಿಮೆ ಆಗಿದೆ ಎಂಬುದನ್ನು ಚಿಂತಿಸಬೇಕಿದೆ. ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡದಿದ್ದರೆ ಜಿಲ್ಲೆಯಲ್ಲಿ ಉರ್ದು ಶಾಲೆಗಳು ಬೇರೆ ಶಾಲೆಗಳ ಜತೆ ವಿಲೀನವಾಗುವುದರಲ್ಲಿ ಅನುಮಾನವಿಲ್ಲ ಎಂದು ಎಚ್ಚರಿಸಿದರು.
ಟ್ರಸ್ಟ್ ಅಧ್ಯಕ್ಷ, ನಿವೃತ್ತ ಡಿವೈಎಸ್ಪಿ ಸೈಯದ್ ಇಸಾಕ್ ಮಾತನಾಡಿ, ಉರ್ದು ಮಾಧ್ಯಮ ಶಾಲೆಗಳಲ್ಲಿ ಫಲಿತಾಂಶ ಕುಸಿತ ಕಳವಳಕಾರಿ ಸಂಗತಿ ಎಂದರು.
ನಿವೃತ್ತ ಡಿವೈಎಸ್ಪಿ ಅಬ್ದುಲ್‌ರೆಹಮಾನ್, ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ನಾಗರಾಜ್, ಉರ್ದು ಇಸಿಒ ಸಮೀರಾ, ಶಬ್ಬೀರ್ ಅಹಮದ್ ಮತ್ತಿತರರು ಇದ್ದರು.