

ನೆಲಮಂಗಲ: ಜನರಿಂದ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಶಾಸಕ ಕೃಷ್ಣಬೈರೇಗೌಡ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಸೊಂಡೇಕೊಪ್ಪ ಮುಖ್ಯರಸ್ತೆಯ ಎ.ಎಲ್.ಆರ್. ಸಭಾಂಗಣದಲ್ಲಿ ಮಂಗಳವಾರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿ ಬೆಂ.ಗ್ರಾಮಾಂತರ ಕ್ಷೇತ್ರದ (ಎಂಎಲ್‌ಸಿ) ಚುನಾವಣೆ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕರ್ತರ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ದೇಶವನ್ನು ಲೂಟಿ ಹೊಡೆಯುತ್ತಿರುವ ಕೇಂದ್ರ ಸರ್ಕಾರದ ಬಗ್ಗೆ ಈಗಾಗಲೇ ಜನರು ತಿಳಿದುಕೊಂಡಿದ್ದಾರೆ. ಜನರ ಪರವಾಗಿ ಅಧಿಕಾರ ಮಾಡದ ಸರ್ಕಾರ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿ. ಅಧಿಕಾರ ವಿಕೇಂದ್ರೀಕರಣ ಮಾಡಬೇಕಾದ ಸರ್ಕಾರ ಇಂದು ಜಿಪಂ, ತಾಪಂ, ನಗರಸಭೆ ಸೇರಿ ಬಿಬಿಎಂಪಿ ಚುನಾವಣೆ ಮಾಡದೆ ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದೆ. ಜತೆಗೆ ಅಭಿವೃದ್ಧಿ ಹೆಸರಿನಲ್ಲಿ ಶೇ.40 ಕಮಿಷನ್ ಪಡೆಯುತ್ತಿದೆ. ಈ ವಿಷಯವನ್ನು ಗುತ್ತಿಗೆದಾರರು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರಿಸಿದರು.
ಮಹಿಳೆಯರಿಗೆ ಶೇ.55 ಮೀಸಲಾತಿ ನೀಡಿದ ಕೀರ್ತಿ ಕಾಂಗ್ರೆಸ್‌ನದ್ದಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಅತಿಹೆಚ್ಚು ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಅದನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ 3 ವರ್ಷಗಳ ಹಿಂದೆ ಸಿಎಂ ಆಗಿದ್ದ ಸಿದ್ಧರಾಮಯ್ಯ ಅವರು ಎತ್ತಿನಹೊಳೆ ಯೋಜನೆ ಜಾರಿಗೊಳಿಸಿ, 14 ಸಾವಿರ ಕೋಟಿ ರೂ. ಮಂಜೂರು ಮಾಡಿದ್ದರು. ಅದರೆ ನಂತರ ಅಧಿಕಾರಕ್ಕೆ ಬಂದ ಸರ್ಕಾರ ಕುಡಿಯುವ ನೀರು ಒದಗಿಸುವಲ್ಲಿ ವಿಲವಾಗಿದೆ ಎಂದು ಆರೋಪಿಸಿದರು.
ಈ ಎಲ್ಲ ಕಾರಣಕ್ಕಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕು. ನಿಮ್ಮೆಲ್ಲರ ಆಶೀರ್ವಾದದಿಂದ ಅಧಿಕಾರ ಸಿಕ್ಕರೆ ಮುಂಬರುವ ದಿನಗಳಲ್ಲಿ ಜನರ ಸಕಲ ಸಮಸ್ಯೆಗಳಿಗೂ ಮುಕ್ತಿ ಹಾಡಲಾಗುವುದು ಎಂದರು.
ಮಾಜಿ ಸಿಎಂ ವೀರಪ್ಪ ಮೊಯ್ಲಿ, ಸಂಸದ ಡಿ.ಕೆ.ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಶಾಸಕ ವೆಂಕಟರಮಣಯ್ಯ, ಮಾಜಿ ಶಾಸಕ ಅಂಜನಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕ ಜಿ.ಆರ್.ಭಾಸ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ನೆ.ಯೋ. ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಆರ್.ಗೌಡ್ರು, ಜಿಪಂ ಮಾಜಿ ಸದಸ್ಯ ಎಚ್.ಪಿ.ಚಲುವರಾಜು, ತಾಪಂ ಸದಸ್ಯ ಬಸವರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನಮ್ಮ ಮತ್ತಿತರರಿದ್ದರು.