

ಚಾಮರಾಜನಗರ: ಮನುಷ್ಯ ಪ್ರತಿದಿನ ಆರೋಗ್ಯ ಹಾಗೂ ಉಲ್ಲಾಸಯುಕ್ತ ಜೀವನ ನಡೆಸಲು ದೈಹಿಕ ಹಾಗೂ ಮಾನಸಿಕ ಆರೋಗ್ಯ ಅತಿ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಒತ್ತಡ ನಿರ್ವಹಣೆ ಬಗ್ಗೆ ವೈದ್ಯಾಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಲು ದಿನನಿತ್ಯ ಹಸಿರು ಸೊಪ್ಪು, ತರಕಾರಿಗಳು, ಕಾಳುಗಳು, ವಿಟಮಿನ್‌ಗಳು ಹೆಚ್ಚಾಗಿ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ 8 ಗಂಟೆ ನಿದ್ರೆಯನ್ನು ಮಾಡಬೇಕು. ವೈದ್ಯ ವೃತ್ತಿ ಒತ್ತಡದಾಯಕ ಕೆಲಸವಾಗಿದೆ. ರೋಗಿಗಳ ಚಿಕಿತ್ಸೆ ನೀಡುವಾಗ ಎಚ್ಚರದಿಂದಿರಬೇಕಾಗುತ್ತದೆ ಎಂದು ಸಲಹೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಮಾತನಾಡಿ, ವೈದ್ಯರು ಕಣ್ಣಿಗೆ ಕಾಣುವ ದೇವರುಗಳಿದ್ದ ಹಾಗೆ, ದಿನಂಪ್ರತಿ ಸಾಕಷ್ಟು ಒತ್ತಡದ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ತಮ್ಮ ವೃತ್ತಿಯಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದರು.
ಮೈಸೂರಿನ ತಿ.ನರಸೀಪುರ ತಾಲೂಕಿನ ಮಾಲಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎನ್.ಮಧೂಸೂದನ್ ಒತ್ತಡ ನಿರ್ವಹಣೆ ಕುರಿತು ವೈದ್ಯರಿಗೆ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಚಂದ್ರಶೇಖರ್, ಮನೋರೋಗ ತಜ್ಞೆ ಮೇರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಹಾಯಕ ಸಂಜಯ್ ಇತರರು ಇದ್ದರು.