ಉತ್ತಮ ಚಾಲಕಿ ಪ್ರಶಸ್ತಿಗೆ ಸೌಮ್ಯಾ ಆಯ್ಕೆ

FotoJet
Published on

ಎಚ್‌ಸಿಎಲ್ ಸಂಸ್ಥೆ ಕೊಡ ಮಾಡುವ ಅವಾರ್ಡ್ |ನೀಲಸಂದ್ರ ಗ್ರಾಮದ ಮಹಿಳೆ | ಎಲ್ಲೆಡೆ ವ್ಯಾಪಕ ಮೆಚ್ಚುಗೆ

ಅಭಿಲಾಷ್ ತಿಟ್ಟಮಾರನಹಳ್ಳಿ, ಚನ್ನಪಟ್ಟಣ

ತನ್ನ ಸಂಸಾರದ ಬಂಡಿ ಸಾಗಿಸಲು ಅನಿವಾರ್ಯವಾಗಿ ತ್ಯಾಜ್ಯ ಸಾಗಿಸುವ ಆಟೋದ ಸ್ಟೇರಿಂಗ್ ಹಿಡಿದ ಮಹಿಳೆಯೊಬ್ಬರು ರಾಜ್ಯದ ಎಚ್‌ಸಿಎಲ್ ಸಂಸ್ಥೆ ಕೊಡ ಮಾಡುವ ಎಚ್‌ಸಿಎಲ್ ಅವಾರ್ಡ್‌ಗೆ ಆಯ್ಕೆಯಾಗಿದ್ದಾರೆ.

ಹೌದು.., ಎಚ್ ಸಿಎಲ್ ಫೌಂಡೇಷನ್‌ನಿಂದ ಸಾಹಸ್ ಸಂಸ್ಥೆಯ ಸಹಯೋಗದೊಂದಿಗೆ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡುವ ಉತ್ತಮ ಚಾಲಕಿ ಪ್ರಶಸ್ತಿಗೆ ತಾಲೂಕಿನ ನೀಲಸಂದ್ರ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ನಿರ್ವಹಣೆ ವಾಹನದ ಚಾಲಕಿ ಬಿ.ಸಿ.ಸೌಮ್ಯಾ ಆಯ್ಕೆಯಾಗಿದ್ದಾರೆ. ಇವರ ಕಾರ್ಯದಕ್ಷತೆ ಗುರುತಿಸಿರುವ ಸಂಸ್ಥೆ ಉತ್ತಮ ಚಾಲಕಿ ಪ್ರಶಸ್ತಿಗೆ ರಾಜ್ಯದಿಂದ ಇವರನ್ನು ಆಯ್ಕೆ ಮಾಡಿದೆ. ಎಚ್‌ಸಿಎಲ್ ಅಂತಾರಾಷ್ಟ್ರೀಯ ಮಟ್ಟದ ಸಾಮಾಜಿಕ ಸೇವಾ ಸಂಸ್ಥೆಯಾಗಿದ್ದು, ವಿವಿಧ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರನ್ನು ಕಸ ಸಂಗ್ರಹಣೆಗಾರರು ಹಾಗೂ ಚಾಲಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಗ್ರಾಪಂಗಳಲ್ಲಿರುವ ತ್ಯಾಜ್ಯ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆ ಪೈಕಿ ನೀಲಸಂದ್ರ ಗ್ರಾಪಂ ತ್ಯಾಜ್ಯ ವಾಹನದ ಚಾಲಕಿ ಬಿ.ಸಿ.ಸೌಮ್ಯಾ ಒಬ್ಬರು. ಹಲವು ವರ್ಷಗಳಿಂದ ಈ ಕೆಲಸವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ

ಜಿಪಂ ಸಿಇಒ ದಿಗ್ವಿಜಯ ಬೋಡ್ಕೆ, ಜಿಪಂ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ತಾಪಂ ಇಒ ಸಂದೀಪ್ ಹಾಗೂ ನೀಲಸಂದ್ರ ಗ್ರಾಪಂ ಅಧ್ಯಕ್ಷ ಬಿಳಿಯಪ್ಪ ಹಾಗೂ ಜಿಲ್ಲಾ ಐಇಸಿ ಸಮಾಲೋಚಕ ಈರೋಬರೆಡ್ಡಿ ಅಭಿನಂದಿಸಿದ್ದಾರೆ.

ಮಾದರಿ ಮಹಿಳೆ

ಪ್ರಶಸ್ತಿಗೆ ಆಯ್ಕೆಯಾಗಿರುವ ಸೌಮ್ಯಾ ನೀಲಸಂದ್ರ ಗ್ರಾಮದ ಚೌಡಯ್ಯ ಎಂಬುವರ ಪತ್ನಿ. ಒಂದೆಡೆ ಬಡತನ, ಮತ್ತೊಂದೆಡೆ ಪತಿಯ ಅನಾರೋಗ್ಯದ ನಡುವೆ ಮೂವರು ಹೆಣ್ಣುಮಕ್ಕಳನ್ನು ಸಾಕುವ ಅನಿವಾರ್ಯತೆಯಲ್ಲಿ ಈಕೆ ಈ ಕಾಯಕದಲ್ಲೇ ತನ್ನ ಸಂಸಾರದ ಬಂಡಿ ಸಾಗಿಸುತ್ತಿದ್ದಾರೆ. ಈಕೆಯ ಪತಿ ಚೌಡಯ್ಯ ಕಳೆದ ಎಂಟು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಬೆನ್ನುಮೂಳೆ ಮುರಿತಕ್ಕೆ ಒಳಗಾಗಿ ಹಾಸಿಗೆ ಹಿಡಿದಿದ್ದಾರೆ. ಅಂದಿನಿಂದ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಇವರಿಗೆ ಕಳೆದ ಮೂರು ವರ್ಷದ ಹಿಂದೆ ಗ್ರಾಪಂನಲ್ಲಿ ಈ ಕೆಲಸ ದೊರೆಯುತ್ತದೆ. ಸ್ವಸಹಾಯ ಸಂಘದ ಸದಸ್ಯರಿಗೆ ಈ ಹುದ್ದೆ ದೊರೆಯುತ್ತದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ತಮ್ಮ ಸಂಬಂಧಿಕರ ಮೂಲಕ ಕೇವಲ ಮೂರೇ ದಿನದಲ್ಲಿ ವಾಹನ ಚಾಲನೆಯನ್ನು ಕಲಿತು ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಂದಿನಿಂದ ನೀಲಸಂದ್ರ ಗ್ರಾಪಂ ವ್ಯಾಪ್ತಿಯ 12 ಗ್ರಾಮದಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 12ರವರೆಗೂ ಆಟೋ ಚಲಾಯಿಸುವ ಮೂಲಕ ಕಸ ಸಂಗ್ರಹಣೆ ಕೆಲಸ ಮಾಡುತ್ತಿದ್ದಾರೆ. ತನ್ನ ಬದುಕಿನ ಬಂಡಿ ಸಾಗಿಸಲು ಕಸದ ಗಾಡಿ ಏರಿದ ಸೌಮ್ಯಾ ತನ್ನ ಕಾಯಕ ನಿಷ್ಠೆ ಹಾಗೂ ಕಾರ್ಯತತ್ಪರತೆಯಿಂದ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ನಮ್ಮ ಕುಟುಂಬ ನಿರ್ವಹಣೆಗೆ ಕೆಲಸದ ಅನಿವಾರ್ಯತೆ ಇತ್ತು. ಆ ಸಮಯದಲ್ಲಿ ಸಿಕ್ಕ ಈ ಕೆಲಸ ವರದಾನವಾಯಿತು. ಆರಂಭದಲ್ಲಿ ಆಟೋ ಓಡಿಸುತ್ತಾಳೆ... ಕಸ ಎತ್ತುತ್ತಾಳೆ ಹೀಗೆ ನಾನಾ ಕುಹಕದ ಮಾತುಗಳು ಕೇಳಿಬಂದಿದ್ದವು. ಜತೆಗೆ ನಿಂದನೆಗಳು ಸಾಮಾನ್ಯವಾಗಿದ್ದವು. ಆದರೆ, ಕಾಲಕಳೆದಂತೆ ಎಲ್ಲರೂ ಸಹಕಾರ ನೀಡಿದರು. ಈ ಕೆಲಸದಿಂದ ಕುಟುಂಬದ ನಿರ್ವಹಣೆಯೂ ನಡೆಯುತ್ತಿದೆ. ಉತ್ತಮ ಚಾಲಕಿ ಪ್ರಶಸ್ತಿ ಖುಷಿ ತಂದಿದೆ. - ಬಿ.ಸಿ. ಸೌಮ್ಯ, ಆಟೋ ಚಾಲಕಿ ಗ್ರಾಪಂನ ತ್ಯಾಜ್ಯ ವಾಹನದ ಚಾಲಕಿಯಾಗಿರುವ ಸೌಮ್ಯಾ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ದೂರು ಬಾರದಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇವರ ಕೆಲಸ ಗುರುತಿಸಿ, ಉತ್ತಮ ಚಾಲಕಿ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ವಿಚಾರ. - ಬಿಳಿಯಪ್ಪ, ನೀಲಸಂದ್ರ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net