

ವಿರಾಜಪೇಟೆ: ವಿರಾಜಪೇಟೆಯಲ್ಲಿ ಉತ್ತಮ ಕ್ರೀಡಾ ಸೌಲಭ್ಯಕ್ಕಾಗಿ ನಮ್ಮ ಧ್ವನಿ ಎಂಬ ಘೋಷವಾಕ್ಯದೊಂದಿಗೆ ಅಂತಾರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಬೆಳಗ್ಗೆ 10 ಗಂಟೆಗೆ ತೆಲುಗರ ಬೀದಿಯ ಮಾರಿಗುಡಿಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ಗ್ರೇಡ್2 ತಹಸೀಲ್ದಾರ್ ಪ್ರದೀಪ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಮಾದಂಡ ತಿಮ್ಮಯ್ಯ ಮಾತನಾಡಿ, ವಿರಾಜಪೇಟೆ ತಾಲೂಕಿನಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಅಂದಾಜು 25 ಸಾವಿರ ವಿದ್ಯಾರ್ಥಿಗಳಿದ್ದಾರೆ. 140 ಹಾಕಿ ತಂಡಗಳಿವೆ. 60 ಇತರ ಕ್ರೀಡಾ ತಂಡಗಳಿವೆ. ರಾಜ್ಯ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟ, ಒಲಿಂಪಿಯನ್ ಹಾಕಿ ಆಟಗಾರರಿದ್ದಾರೆ. ಅಥ್ಲಿಟ್‌ಗಳು, ನುರಿತ ಈಜುಗಾರರು ಸೇರಿದಂತೆ ಬಹುಮುಖ ಪ್ರತಿಭೆಯ ಆಟಗಾರರಿದ್ದರೂ ಕ್ರೀಡೆಯನ್ನು ಮೇಲ್ದರ್ಜೆಗೇರಿಸಲು ಯಾವುದೇ ಸೌಕರ್ಯಗಳಿಲ್ಲ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಬೇಕಾದರೆ ತರಬೇತಿ ಪಡೆದುಕೊಳ್ಳಲು ಉತ್ತಮ ಮೈದಾನಗಳಿರಬೇಕು. ಇರುವ ಒಂದು ಜೂನಿಯರ್ ಕಾಲೇಜು ಮೈದಾನದಲ್ಲಿ ಎಲ್ಲ ಕ್ರೀಡೆಗಳನ್ನು ನಡೆಸುವ ಪರಿಸ್ಥಿತಿ ಎದುರಾಗಿದೆ ಎಂದರು.
ಹಾಕಿ ಆಟಕ್ಕೆ ಆಸ್ಟ್ರೋ ಟರ್ಫ್ ಸಿಂಥೆಟಿಕ್ ಟ್ರಾೃಕ್, ಇತರ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಒಳಾಂಗಣ ಕ್ರೀಡಾಂಗಣ ಇಲ್ಲದೆ ಆಟಗಾರರು ಮೈಸೂರು, ಬೆಂಗಳೂರಿಗೆ ಗುಳೆ ಹೋಗುತ್ತಿದ್ದಾರೆ. ಕ್ರೀಡಾಪಟುವಿಗೆ ಯಾವುದೇ ಸೌಲಭ್ಯಗಳಿಲ್ಲದೆ ಆತನ ಸ್ವಂತ ಪರಿಶ್ರಮದಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರೂ ಜಿಲ್ಲಾಡಳಿತ, ತಾಲೂಕು ಆಡಳಿತ ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದೆ. ಇರುವ ಒಂದು ತಾಲೂಕು ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವೃದ್ಧರು, ಮಕ್ಕಳು ಕೆಲಸ ಮುಗಿಸಿ ಸಂಜೆ ಬರುವವರಿಗೆ ವಾಕಿಂಗ್‌ಗೆ ಮೈದಾನಗಳಿಲ್ಲ ಎಂದು ಆರೋಪಿಸಿದರು.
ನಮ್ಮ ಮನವಿಗೆ ಸ್ಪಂದನೆ ದೊರೆಯದಿದ್ದರೆ ಬೇಡಿಕೆ ಈಡೇರುವವರೆಗೆ ನವೆಂಬರ್ 7ರಿಂದ ಗಡಿಯಾರದ ಕಂಬದ ಬಳಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ 70ಕ್ಕೂ ಅಧಿಕ ಕ್ರಿಡಾಪಟುಗಳು ಭಾಗವಹಿಸಿದ್ದರು.
ಬೇಡಿಕೆಗಳು:
ಕ್ರೀಡಾ ಜಿಲ್ಲೆ ಎಂದು ಹೆಸರು ಮಾತ್ರ. ಕ್ರೀಡೆಯನ್ನು ಉತ್ತೇಜಿಸಲು ಯಾವುದೇ ಸೌಲಭ್ಯಗಳಿಲ್ಲ. 28 ದೇಶಗಳಲ್ಲಿ 42 ಬಾರಿ ಅಂತಾರಾಷ್ಟ್ರೀಯ ರಗ್ಬಿ ಪಂದ್ಯದಲ್ಲಿ ಭಾಗವಹಿಸಿದ್ದೇನೆ. ನಾನು ಸ್ಥಳೀಯವಾಗಿದ್ದರೂ ನನ್ನ ಪಾಲಕರನ್ನು ಬಿಟ್ಟು ಮೈಸೂರು, ಬೆಂಗಳೂರು ಕಡೆಗೆ ತೆರಳಿದ ಕಾರಣ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು. ಕ್ರೀಡೆಗೆ ಯಾವುದೇ ಸೌಲಭ್ಯ ಇಲ್ಲದ ವಿರಾಜಪೇಟೆಯಲ್ಲಿಯೇ ಇದ್ದಿದ್ದರೆ ನನ್ನ ಪರಿಶ್ರಮ ಶೂನ್ಯವಾಗುತ್ತಿತ್ತು.
ಪಟ್ಣಣದಲ್ಲಿ ಸುಮಾರು 5ರಿಂದ 6 ಸಾವಿರ ಮಕ್ಕಳಿದ್ದಾರೆ. ಆಟದ ಮೈದಾನ ಇಲ್ಲದ ಮಕ್ಕಳ ಮೊಬೈಲ್‌ನಲ್ಲಿ ಪಬ್‌ಜಿ ಅಂತಹ ಆನ್‌ಲೈನ್ ಗೇಮ್ಸ್‌ಗಳು ಮತ್ತು ಗಾಂಜಾ ಅಫೀಮುಗಳಂತಹ ಮಾದಕ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕ್ರೀಡಾ ಚಟುವಟಿಕೆಗೆ ಅವಕಾಶ ಇಲ್ಲದೆ ದೈಹಿಕ ಸಾಮಥ್ಯವನ್ನು ಕಳೆದುಕೊಂಡು ಯುವಜನತೆ ನಿಷ್ಪ್ರಯೋಜಕರಾಗಿದ್ದಾರೆ.
ಪೋಟೋ 07 ವಿಟಿಪಿ1 ಕ್ರೀಡಾ ಸೌಲಭ್ಯ ದೊರಕಿಸಿಕೊಡುವಂತೆ ತಹಸೀಲ್ದಾರ್ ಪ್ರದೀಪ್‌ಕುಮಾರ್ ಮೂಲಕ ಮಾದಂಡ ತಿಮ್ಮಯ್ಯ ಮನವಿ ಸಲ್ಲಿಸುತ್ತಿರುವುದು. 2 ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕ್ರೀಡಾರ್ಥಿಗಳು. 3 ಮಾದಂಡ ತಿಮ್ಮಯ್ಯ, 4 ಆಸಿಫ್ ಮನ್ನಾ.