

ಹಾಸನ: ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ಯಾರೇ ಆದರೂ ಅವರಿಗೆ ಗೌರವ ಸಲ್ಲಿಸಿದರೆ ಅದಕ್ಕಿಂತ ಬೇರೆ ಪ್ರಶಸ್ತಿ ಬೇಕಿಲ್ಲ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಉಪಾಧ್ಯಕ್ಷ ಡಾ. ಟಿ.ಹೆಚ್. ಆಂಜನಪ್ಪ ಹೇಳಿದರು.
ನಗರದ ಕೆ.ಆರ್.ಪುರಂನ ಸಂಜೀವಿನಿ ಆಸ್ಪತ್ರೆ ಆವರಣದಲ್ಲಿ ದಿ.ಡಾ.ಗುರುರಾಜ್ ಹೆಬ್ಬಾರ್ ಹುಟ್ಟು ಹಬ್ಬದ ಅಂಗವಾಗಿ, ಗುರುರಾಜ್ ಹೆಬ್ಬಾರ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಡಾ.ಗುರುರಾಜ್ ಹೆಬ್ಬಾರ್ ರಂತವರ ಪರಿಚಯ ಮಾಡಿಕೊಟ್ಟು ಅವರ ಆದರ್ಶಗಳನ್ನು ಮೈಗೂಡಿಸಿಗೊಳ್ಳುವಂತೆ ತಿಳಿಸಬೇಕು ಎಂದರು.
ಸಮಾಜದಲ್ಲಿ ಡಾ.ಹೆಬ್ಬಾರ್ ಅಂತವರ ಬಗ್ಗೆ ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ತಿಳಿಸುವ ಕೆಲಸ ಮಾಡುವ ಅಗತ್ಯವಿದೆ. ಹೆಬ್ಬಾರ್ ಅವರ ಸಾಧನೆಗೆ ಸಾಟಿಯಿಲ್ಲ. ಅವರ ಕೆಲಸ ಕಾರ್ಯಗಳನ್ನು ಇಷ್ಟೊಂದು ಜನರು ನೆನಪಿಸಿಕೊಳ್ಳುತಿರುವುದೇ ಒಂದು ದೊಡ್ಡ ಸಾಧನೆಯಾಗಿದೆ. ರೋಗಿಗಳಿಗೆ ಕೇವಲ ಚಿಕಿತ್ಸೆ ಮಾತ್ರ ನೀಡದೆ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಗುರುತರ ಸೇವೆ ಸೇವೆ ಸಲ್ಲಿಸಿದ ಡಾ. ಗುರುರಾಜ ಹೆಬ್ಬಾರ್ ಅವರು ಪ್ರಾತ: ಸ್ಮರಣೀಯರು ಎಂದು ಹೇಳಿದರು.
ಸ್ವಂತ ಆಸ್ಪತ್ರೆ ಇದ್ದರೂ ಸಹ ಸಂಜೀವಿನಿ ಸಹಕಾರಿ ಆಸ್ಪತ್ರೆಯನ್ನು ತೆರೆಯುವ ಮೂಲಕ ರೈತರು, ಬಡವರಿಗೆ ನೆರವಾದರು. ರಾಜ್ಯದಲ್ಲಿ ಘಟಪ್ರಭಾ ಸಹಕಾರಿ ಆಸ್ಪತ್ರೆ ಬಿಟ್ಟರೆ ಹಾಸನದಲ್ಲಿನ ಸಂಜೀವಿನಿ ಸಹಕಾರಿ ಆಸ್ಪತ್ರೆ, ಉನ್ನತ ಸ್ಥಾನವನ್ನು ಪಡೆದಿದೆ. ಹೆಬ್ಬಾರ್‌ರ ಸಲಹೆ ಸೂಚನೆಯ ಮೇರೆಗೆ ಅಸ್ತಿತ್ವ ಪಡೆದ ಸಂಸ್ಥೆ ರಾಜ್ಯಾದ್ಯಂತ ಹೆಸರು ಮಾಡಿದೆ ಎಂದರು.
ಹೆಬ್ಬಾರ್ ಅವರು ಕಾಲವಾದ ನಂತರ ಅವರ ಕುಟುಂಬ ವರ್ಗವು ಸೇವಾ ಚಟುವಟಿಕೆ ಮುಂದುವರಿಸಿದ್ದು ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವರಿಗೆ ಡಾ. ಗುರುರಾಜ್ ಹೆಬ್ಬಾರ್ ಸೇವಾ ಪ್ರಶಸ್ತಿಯನ್ನು ಹಿಮ್ಸ್ ಆಸ್ಪತ್ರೆ ಕ್ಯಾನ್ಸರ್ ವಿಭಾಗದ ಡಾ. ಜಗದೀಶ್ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಬೆಂಗಳೂರಿನ ನ್ಯೂ ಆರ್ಕ್ ಮಿಷನ್ ಆಪ್ ಇಂಡಿಯಾದ ಟಿ. ರಾಜ ಅವರನ್ನು ಸನ್ಮಾನಿಸಿ ಗೌರವಿಸಿದರು. ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಾವಿರಾರು ಜನರು ಲಾಭ ಪಡೆದರು.
ಕಾರ್ಯಕ್ರಮದಲ್ಲಿ ಹಿಮ್ಸ್ ನಿರ್ದೇಶಕ ಡಾ.ಸಂತೋಷ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅನಿಲ್ ಕುಮಾರ್, ಪ್ರೊ.ಬಿ.ಸಿ.ರವಿ ಕುಮಾರ್, ಹಿಮ್ಸ್ ವೈದ್ಯಕೀಯ ಅಧೀಕ್ಷಕ ಕೃಷ್ಣಮೂರ್ತಿ, ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ಎಚ್.ಪಿ.ಮೋಹನ್, ಹಿರಿಯ ಸಾಹಿತಿ ಹಂಪನಹಳ್ಳಿ ತಿಮ್ಮೇಗೌಡ, ಡಾ. ಗುರುರಾಜ್ ಹೆಬ್ಬಾರ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಜಿ. ಪ್ರತಿಭಾ, ಪರಿಪೂರ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರೋ. ಎಚ್.ವಿ. ಲಕ್ಷ್ಮೀನಾರಾಯಣ್, ಕಾಮಧೇನು ಸಹಕಾರಿ ವಿದ್ಯಾಶ್ರಮ ಅಧ್ಯಕ್ಷ ಮಾಧವ್ ಶೈಣ್ಯೆ, ಟ್ರಸ್ಟ್ ಉಪಾಧ್ಯಕ್ಷ ಡಾ. ಚವಾಣ್ ಸೇರಿದಂತೆ ಇತರರು ಇದ್ದರು.
15 ಜನರು ದೇಹ ದಾನ ನೋಂದಣಿ :
ಡಾ ಹೆಬ್ಬಾರ್ ಅವರ ಜನ್ಮ ದಿನೋತ್ಸವದ ಅಂಗವಾಗಿ ನಡೆದಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 250 ಹೆಚ್ಚು ರೋಗಿಗಳು ತಪಾಸಣೆಗೆ ಭಾಗಿಯಾದರು. ಇದಲ್ಲದೆ ರಕ್ತದಾನವನ್ನ 32 ಜನರು ಮಾಡಿದರು ನೇತ್ರದಾನಕ್ಕೆ 30 ಜನರು, ದೇಹ ದಾನಕ್ಕೆ 15 ಜನರು ನೋಂದಣಿ ಮಾಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮವಾಯಿತು.