

ಮುನವಳ್ಳಿ: ಯೋಗಾಸನ ಕೇವಲ ಕ್ರೀಡೆಯಲ್ಲ. ಈ ಅಭ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಜೀವನಶೈಲಿ ಜತೆಗೆ ಉತ್ತಮ ಜೀವನ ನಡೆಸಲು ನಮಗೆ ಸಹಾಯಕ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.
ಪಟ್ಟಣದ ಶ್ರೀ ಪಂಚಲಿಂಗೇಶ್ವರ ಸಭಾಂಗಣದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗಮಟ್ಟದ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಯೋಗವು ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ಸಕಾರಾತ್ಮವಾಗಿ ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಚಿತ್ತ ಚಾಂಚಲ್ಯ ತೊಡೆದು ಹಾಕುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸೋಮಶೇಖರಮಠದ ಮುರುಘೇಂದ್ರ ಶ್ರೀ, ಯೋಗ ಭಾರತೀಯರ ಹೆಮ್ಮೆಯ ಪ್ರತೀಕವಾಗಿ ಜಗತಿನಾದ್ಯಂತ ಖ್ಯಾತಿ ಪಡೆದಿದೆ. ಇಂದಿನ ದಿನಮಾನಕ್ಕೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಹೊಂದಲು ಮನುಷ್ಯ ಯೋಗವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯ ಎಂದರು.
ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಎಂ.ನಿರಂಜನಮೂರ್ತಿ ಮಾತನಾಡಿ, ಯೋಗವು ಒಂದು ವ್ಯಾಯಾಮವಷ್ಟೆ ಅಲ್ಲ ಅದು ಬದುಕು ಬದಲಿಸುವ ಜೀವನಮೌಲ್ಯವಾಗಿದೆ. ಇನ್ನಿತರ ಕ್ರೀಡೆಗಳಿಗೆ ಸಿಗುವ ಪ್ರಾಮುಖ್ಯತೆ ಯೋಗಾಸನಕ್ಕೂ ಕೂಡ ದೊರೆತು ಯೋಗಾಸನ ಹಾಗೂ ಯೋಗಪಟುಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಆಶಿಸಿದರು.
ಉಪ್ಪಿನಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬೆಳಗಾವಿ ಬಿ.ಎಂ.ಕಂಕಣವಾಡಿ ಆಯುರ್ವೇದಿಕ್ ಕಾಲೇಜ್‌ನ ಯೋಗ ಚಿಕಿತ್ಸಕಿ ಆರತಿ ಪಡಸಲಗಿ, ಯೋಗಾಸನಾ ಕ್ರೀಡಾ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎನ್. ಪರುಶುರಾಮಪ್ಪ, ಸಂಸ್ಥೆಯ ಉಪಾಧ್ಯಕ್ಷ ಅರುಣಗೌಡ ಪಾಟೀಲ, ಸಂಜೀವಕುಮಾರ ಕಾಮಣ್ಣವರ, ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ ಕಾಮಣ್ಣವರ, ಯೋಗ ತರಬೇತಿದಾರ ಶ್ರೀಶೈಲ ಗೋಪಶೆಟ್ಟಿ, ಅಶೋಕ ಸಂಕಣ್ಣವರ, ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ, ಎಂ.ಎ.ಕಮತಗಿ, ಮಹೇಶ ಕದಂ, ಅಪ್ಪು ಹಿರಲಿಂಗನ್ನವರ, ಪರಶುರಾಮ ಕದಂ, ದಾನು ಗದಗಿನ ಪ್ರಮೋದ ಕಾಮಣ್ಣವರ, ಸಂಜು ಬೆಳ್ಳಿಕುಪ್ಪಿ, ಶ್ರೀಧರ ಮೊರಬದ, ಶಿಕ್ಷಕ ಬಿ.ಬಿ.ಹುಲಿಗೊಪ್ಪ, ಗಂಗಾಧರ ಗೊರಾಬಾಳ ಇತರರು ಇದ್ದರು. ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಿಂದ ಆಗಮಿಸಿದ್ದ 120 ಕ್ಕೂ ಹೆಚ್ಚು ಯೋಗಪಟುಗಳು ಇದ್ದರು.